ADVERTISEMENT

ಮೇಕೆದಾಟು: ಮುಖ್ಯಮಂತ್ರಿಗಳ ಸಭೆಗೆ ಸಮ್ಮತಿ

ಕೇಂದ್ರ ಜಲಸಂಪನ್ಮೂಲ ಸಚಿವ ಗಡ್ಕರಿ ಭೇಟಿ ಮಾಡಿ ಚರ್ಚಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 19:59 IST
Last Updated 26 ಡಿಸೆಂಬರ್ 2018, 19:59 IST
ಜಲಸಂಪನ್ಮೂಲ ಸಚಿವ ನಿತಿನ್‌ಗಡ್ಕರಿ ಅವರನ್ನು ಸಿ.ಎಂ ಎಚ್‌. ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಭೇಟಿ ಮಾಡಿದರು
ಜಲಸಂಪನ್ಮೂಲ ಸಚಿವ ನಿತಿನ್‌ಗಡ್ಕರಿ ಅವರನ್ನು ಸಿ.ಎಂ ಎಚ್‌. ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಭೇಟಿ ಮಾಡಿದರು   

ನವದೆಹಲಿ: ಮೇಕೆದಾಟು ಯೋಜನೆ ಕುರಿತ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರವೇ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಬುಧವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಒಂದು ಗಂಟೆ ಕಾಲ ಚರ್ಚಿಸಿದ ಅವರು, ‘ವಾಸ್ತವವಾಗಿ ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲ ಆಗಲಿದೆ ಎಂಬ ವಿಷಯ ನನಗೆ ಮನವರಿಕೆಯಾಗಿದೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡುವ ಉದ್ದೇಶದಿಂದ ಶೀಘ್ರವೇ ಸಭೆ ಆಯೋಜಿಸಲಾಗುವುದು’ ಎಂದರು.

ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸೌಹಾರ್ದವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಮಹದಾಯಿ ನೀರು ಹಂಚಿಕೆ ಮಾಡಿರುವ ನ್ಯಾಯಮಂಡಳಿಯ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇದರಿಂದಾಗಿ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಅಡ್ಡಿಯಾಗಿದೆ. ಕೂಡಲೇ ಈ ಕುರಿತೂ ಮಾತುಕತೆ ನಡೆಸಲಾಗುವುದು ಎಂದು ಗಡ್ಕರಿ ಹೇಳಿದರು.

ಮಹದಾಯಿ ಕುರಿತು ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ಗಳ ಅಂತಿಮ ತೀರ್ಪು ಹೊರಬಿದ್ದ ನಂತರವಷ್ಟೇ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸುವುದು ಸೂಕ್ತ ಎಂದೂ ಅವರು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ– ಧಾರವಾಡ ಬೈಪಾಸ್‌ ರಸ್ತೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 45 ಮೀಟರ್‌ ಜಾಗೆಯ ಅಗತ್ಯವಿದೆ. ರಾಜ್ಯ ಸರ್ಕಾರ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಭೂಮಿ ಒದಗಿಸಿದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದೂ ಭರವಸೆ ನೀಡಿದರು.

ಬೆಂಗಳೂರು– ಮೈಸೂರು ನಡುವಿನ ಹೆದ್ದಾರಿ ಅಭಿವೃದ್ಧಿಗಾಗಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲೂ ಕೇಂದ್ರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಈ ಸಂದರ್ಭ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.