ADVERTISEMENT

ಲೈಂಗಿಕ ಕಿರುಕುಳ ಆರೋಪ: ಸ್ಥಾನ ತೊರೆದ ಹಿಂದೂಸ್ತಾನ್ ಟೈಮ್ಸ್ ಬ್ಯೂರೊ ಮುಖ್ಯಸ್ಥ 

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 15:42 IST
Last Updated 8 ಅಕ್ಟೋಬರ್ 2018, 15:42 IST
ಪ್ರಕಾಶ್ ಝಾ  (ಕೃಪೆ:ಟ್ವಿಟರ್)
ಪ್ರಕಾಶ್ ಝಾ (ಕೃಪೆ:ಟ್ವಿಟರ್)   

ನವದೆಹಲಿ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಕಾರಣ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಬ್ಯೂರೊ ಮುಖ್ಯಸ್ಥ, ರಾಜಕೀಯ ಸಂಪಾದಕ ಪ್ರಶಾಂತ್ ಝಾ ತಮ್ಮ ಸ್ಥಾನ ತೊರೆದಿದ್ದಾರೆ.ಈ ಪ್ರಕರಣದ ಬಗ್ಗೆ ಪ್ರಧಾನ ಸಂಪಾದಕ ಸುಕುಮಾರನ್ ಅವರಿಗೆ ವಿವರಣೆ ನೀಡುವಂತೆ ಸಂಸ್ಥೆ ಆದೇಶಿಸಿದೆ.

ಪ್ರಸ್ತುತ ಪತ್ರಿಕೆಯಲ್ಲಿ ವರದಿಗಾರನಾಗಿ ಮುಂದುವರಿಯಲಿರುವ ಝಾ ಅವರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ.ಪ್ರಕರಣ ಬಗ್ಗೆ ಐಸಿಸಿ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ತಮ್ಮ ಸ್ಥಾನ ತೊರೆಯುವಂತೆ ಪತ್ರಿಕಾ ಸಂಸ್ಥೆ ಝಾ ಅವರಿಗೆ ಆದೇಶಿಸಿತ್ತು ಎಂದು ಮೂಲಗಳು ಹೇಳಿವೆ. 'How The BJP Wins’ ಮತ್ತು Battles of The New Republic: A Contemporary History of Nepal’ ಎಂಬ ಪುಸ್ತಕಗಳ ಲೇಖಕರಾಗಿದ್ದಾರೆ ಝಾ.

ADVERTISEMENT

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಮಾಜಿ ಪತ್ರಕರ್ತೆ ಈ ಆರೋಪ ಹೊರಿಸಿದ್ದು ಝಾ ಜತೆಗೆ ನಡೆದ ವಾಟ್ಸ್ ಆ್ಯಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಟ್ವಿಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.

ಏಪ್ರಿಲ್ 2017ರಲ್ಲಿ ಈ ಸಂಭಾಷಣೆ ನಡೆದಿದ್ದು ಆ ಹೊತ್ತಿಗೆ ಈಕೆ ಹಿಂದೂಸ್ತಾನ್ ಟೈಮ್ಸ್ ನ ಉದ್ಯೋಗಿ ಆಗಿರಲಿಲ್ಲ, ಹಾಗಾಗಿ ಸಂಸ್ಥೆಗೆ ಈ ಬಗ್ಗೆ ದೂರು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಎಐಬಿ ಕಾಮಿಡಿ ತಂಡದ ತನ್ಮಯ್ ಭಟ್ ಮತ್ತು ಗುರುಸಿಮ್ರಾನ್ ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದು ತನ್ಮಯ್ ಭಟ್ಎಐಬಿ ತಂಡ ತೊರೆದ ಬೆನ್ನಲ್ಲೇ ಝಾ ಪ್ರಕರಣ ಸುದ್ದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.