ADVERTISEMENT

ತಾಹಿಲ್‌ರಮಣಿ ಬೆಂಬಲಕ್ಕೆ ವಕೀಲ ಸಮುದಾಯ

ಚೆನ್ನೈ: ಪ್ರತಿಭಟನೆಗೆ 18 ಸಾವಿರ ವಕೀಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
   

ಚೆನ್ನೈ: ಮೇಘಾಲಯ ಹೈಕೋರ್ಟ್‌ಗೆ ವರ್ಗಾವಣೆ ವಿರೋಧಿಸಿ ರಾಜೀನಾಮೆ ನೀಡಿರುವ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯಾ ಕೆ. ತಾಹಿಲ್‌ರಮಣಿ ಅವರ ಬೆಂಬಲಕ್ಕೆ ತಮಿಳುನಾಡಿನ ವಕೀಲ ಸಮುದಾಯ ನಿಂತಿದೆ.

ವಿಜಯಾ ಅವರಿಗೆ ಬೆಂಬಲವಾಗಿ ಮಂಗಳವಾರ ಕೋರ್ಟ್ ಕಲಾಪ ಬಹಿಷ್ಕರಿಸಲು 18 ಸಾವಿರ ವಕೀಲರು ನಿರ್ಧರಿಸಿದ್ದಾರೆ. ವರ್ಗಾವಣೆ ಮರುಪರಿಶೀಲಿಸುವಂತೆ ಕೋರಿದ್ದ ಮನವಿಯನ್ನು ಕೊಲಿಜಿಯಂ ತಿರಸ್ಕರಿಸಿದ್ದರಿಂದ ಅವರು ಸೆ.6ರಂದು ರಾಷ್ಟ್ರಪತಿಯವರಿಗೆ ರಾಜೀನಾಮೆ ಸಲ್ಲಿಸಿದ್ದರು.

‘ಹೈಕೋರ್ಟ್ ಸಿಜೆ ದಿಢೀರ್ ವರ್ಗಾವಣೆ ಅಗತ್ಯವಿರಲಿಲ್ಲ. ಇದರಲ್ಲಿ ಪ್ರತೀಕಾರದ ಉದ್ದೇಶವಿದ್ದಂತೆ ತೋರುತ್ತಿದೆ. ಮೂವರು ನ್ಯಾಯಮೂರ್ತಿಗಳ ಮೇಘಾಲಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಹುದ್ದೆ ಖಾಲಿಯಿಲ್ಲ. ಕಾಲೇಜು ಪ್ರಾಂಶುಪಾಲರನ್ನು ಕಿಂಡರ್ ಗಾರ್ಟನ್ ಶಾಲೆಗೆ ವರ್ಗಾಯಿಸಿದ ರೀತಿಗೆ ಇದು ಸಮನಾಗಿದೆ’ ಎಂದು ಮದ್ರಾಸ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಮೋಹನ್‌ಕೃಷ್ಣನ್ ಆರೋಪಿಸಿದ್ದಾರೆ.

ADVERTISEMENT

2018ರಲ್ಲಿ ಮದ್ರಾಸ್ ಹೈಕೋರ್ಟ್‌ ಸಿಜೆ ಆಗಿ ನೇಮಕವಾದ ವಿಜಯಾ,ದೇಶದ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಪೈಕಿ ಅತ್ಯಂತ ಹಿರಿಯರು.ಬಿಲ್ಕಿಸ್‌ ಬಾನು ಪ್ರಕರಣದ 11 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯುವ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.