ADVERTISEMENT

ದೇಸಿ ಪಿಸ್ತೂಲ್ ತಯಾರಾಗುತ್ತಿದ್ದ ಲಖನೌದಲ್ಲಿ ಕ್ಷಿಪಣಿ ತಯಾರಿಕೆ ಆಗಲಿದೆ: ರಾಜನಾಥ್

ಪಿಟಿಐ
Published 16 ಫೆಬ್ರುವರಿ 2022, 16:11 IST
Last Updated 16 ಫೆಬ್ರುವರಿ 2022, 16:11 IST
ರಾಜನಾಥ್ ಸಿಂಗ್: ಪಿಟಿಐ ಚಿತ್ರ
ರಾಜನಾಥ್ ಸಿಂಗ್: ಪಿಟಿಐ ಚಿತ್ರ   

ಲಖನೌ: ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತಿದ್ದ ಕಟ್ಟಾಸ್(ಸ್ಥಳೀಯವಾಗಿ ತಯಾರಿಸುವ ಪಿಸ್ತೂಲ್)ಗಳ ಜಾಗದಲ್ಲಿ ಬಿಜೆಪಿ ಆಡಳಿತದಲ್ಲಿ ಕ್ಷಿಪಣಿಗಳು ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಖನೌದ ಮಲಿಹಾಬಾದ್ ಮತ್ತು ಕಾನ್ಪುರದ ಬಬುಪೂರ್ವದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಅಂತಹ ಕ್ಷಿಪಣಿಗಳನ್ನು ಲಖನೌದಲ್ಲಿ ತಯಾರಿಸಲಾಗುತ್ತದೆ. ಅವುಗಳು 400–600 ಕಿ.ಮೀ ದೂರದಲ್ಲಿ ಶತ್ರುಗಳನ್ನು ಹೊಡೆದುರುಳಿಸಲಿವೆ ಎಂದು ಹೇಳಿದರು.

ಮಲಿಹಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೈ ದೇವಿ ಮತ್ತು ಅವರ ಪತಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರನ್ನು ಹೊಗಳಿದ ರಾಜನಾಥ್ ಸಿಂಗ್, ಲಖನೌದಲ್ಲಿ ದೊಡ್ಡ ಗನ್‌ಗಳ ತಯಾರಿಕೆ ಆಗಲಿದೆ ಎಂದಿದ್ದಾರೆ.

‘ನಾವು ಹೇಳಿದನ್ನು ಮಾಡುತ್ತೇವೆ, ಅದು ಬಿಜೆಪಿಯ ಗುಣ. 370ನೇ ವಿಧಿ ತೆಗೆದುಹಾಕುತ್ತೇವೆಂದು ಹೇಳಿದ್ದೆವು. ಸಂಸತ್ತಿನಲ್ಲಿ ಬಹುಮತ ಸಿಕ್ಕ ಕೂಡಲೆ ಮಾಡಿದೆವು’ ಎಂದು ಸಿಂಗ್ ಹೇಳಿದ್ದಾರೆ.

ADVERTISEMENT

ಸಮಾಜವಾದಿ ಎಂದು ಹೇಳುವ ಅಖಿಲೇಶ್ ಯಾದವ್, ಎಂದಿಗೂ ಆ ರೀತಿ ನಡೆದುಕೊಂಡಿಲ್ಲ ಎಂದು ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

‘ಸಮಾಜವಾದಿ ಎಂದರೆ ಸಾಮಾನ್ಯ ಜನರ ಹಸಿವು ಮತ್ತು ಭಯಕ್ಕೆ ಪರಿಹಾರ ನೀಡುವವನು. ಆ ರೀತಿ ಕೆಲಸ ಮಾಡುತ್ತಿರುವ ಏಕೈಕ ರಾಜಕಾರಣಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ’ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.