ADVERTISEMENT

UP Poll 2022: ಬಿಜೆಪಿ ಶಿಕ್ಷಿಸಲು ‘ಮಿಷನ್‌ ಉತ್ತರ ಪ್ರದೇಶ’

ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ಅಭಿಯಾನ

ಶೆಮಿಜ್‌ ಜಾಯ್‌
Published 3 ಫೆಬ್ರುವರಿ 2022, 19:31 IST
Last Updated 3 ಫೆಬ್ರುವರಿ 2022, 19:31 IST
ರೈತ ಮುಖಂಡರಾದ ಯೋಗೇಂದ್ರ ಯಾದವ್‌, ಹನ್ನನ್‌ ಮುಲ್ಲಾ, ದರ್ಶನ್‌ ಪಾಲ್‌, ರಾಕೇಶ್‌ ಟಿಕಾಯತ್‌, ಜಗಜಿತ್‌ ಸಿಂಗ್‌ ದಲ್ಲೆವಾಲ್‌ ಮತ್ತು ಜೋಗಿಂದರ್ ಸಿಂಗ್‌ ಉಗ್ರಹಾನ್‌ ಅವರು ದೆಹಲಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಫಲಕಗಳನ್ನು ಪ್ರದರ್ಶಿಸಿದರು –ಪಿಟಿಐ ಚಿತ್ರ
ರೈತ ಮುಖಂಡರಾದ ಯೋಗೇಂದ್ರ ಯಾದವ್‌, ಹನ್ನನ್‌ ಮುಲ್ಲಾ, ದರ್ಶನ್‌ ಪಾಲ್‌, ರಾಕೇಶ್‌ ಟಿಕಾಯತ್‌, ಜಗಜಿತ್‌ ಸಿಂಗ್‌ ದಲ್ಲೆವಾಲ್‌ ಮತ್ತು ಜೋಗಿಂದರ್ ಸಿಂಗ್‌ ಉಗ್ರಹಾನ್‌ ಅವರು ದೆಹಲಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಫಲಕಗಳನ್ನು ಪ್ರದರ್ಶಿಸಿದರು –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರವು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ), ‘ಮಿಷನ್‌ ಉತ್ತರ ಪ್ರದೇಶ’ ಎಂಬ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶಿಕ್ಷಿಸುವುದು ಈ ಅಭಿಯಾನದ ಉದ್ದೇಶ.

ಕೇಂದ್ರವು ವಿವಾದಾತ್ಮಕವಾದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ. ಆದರೆ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಮತ್ತು ರೈತರ ಮೇಲೆ ಹಾಕಿದ್ದ ಪ್ರಕರಣಗಳ ರದ್ದತಿಯಂತಹ ಲಿಖಿತ ಭರವಸೆಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಎಸ್‌ಕೆಎಂ ಆರೋಪಿಸಿದೆ.

ಎಸ್‌ಕೆಎಂನ ಹಿರಿಯ ಮುಖಂಡರಾದ ರಾಕೇಶ್‌ ಟಿಕಾಯತ್‌, ಹನ್ನನ್‌ ಮುಲ್ಲಾ, ಜೋಗಿಂದರ್‌ ಸಿಂಗ್‌ ಉಗ್ರಹಾನ್‌, ಡಾ. ದರ್ಶನ್‌ ಪಾಲ್‌, ಜಗಜಿತ್‌ ಸಿಂಗ್‌ ದಲ್ಲೆವಾಲ್‌, ಶಿವಕುಮಾರ್‌ ಶರ್ಮಾ ಕಕ್ಕಾಜಿ ಮತ್ತು ಯೋಗೇಂದ್ರ ಯಾದವ್‌ ಅವರು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ರೈತ ಮುಖಂಡರು ಖಂಡಿಸಿದ್ದಾರೆ. ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ರೈತರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಅಜಯ್‌ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ರೈತರು ಆಗ್ರಹಿಸಿದ್ದರು.

ADVERTISEMENT

ಯಾವುದೇ ಪಕ್ಷದ ಪರವಾಗಿ ಎಸ್‌ಕೆಎಂ ಮತ ಯಾಚಿಸುವುದಿಲ್ಲ. ಸಂಘಟನೆ ರಾಜಕೀಯದಿಂದ ದೂರವೇ ಉಳಿಯಲಿದೆ ಎಂದು ಎಸ್‌ಕೆಎಂ ಮುಖಂಡರು ಪುನರುಚ್ಚರಿಸಿದ್ದಾರೆ.

ಕೇಂದ್ರದ ಬಜೆಟ್‌ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ. ರೈತರ ಹಿತಾಸಕ್ತಿಗೆ ಧಕ್ಕೆ ತರುವಂತಹ ಬಜೆಟ್‌ ಮಂಡಿಸಲಾಗಿದೆ ಎಂದು ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಚುನಾವಣೆಯ ವಿಷಯದಲ್ಲಿ ನಿಲುವು ತಳೆಯುವಂತಹ ಬಲವಂತದ ಸ್ಥಿತಿ ನಿರ್ಮಾಣ ಆಗಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು. ಉತ್ತರ ಪ್ರದೇಶದಾದ್ಯಂತ ಸಣ್ಣಸಣ್ಣ ಸಭೆಗಳನ್ನು ನಡೆಸಲಾಗುವುದು ಎಂದು ಮುಲ್ಲಾ ತಿಳಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ‘ಭದ್ರಕೋಟೆ’ ಗೋರಖಪುರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ರೈತ ಮುಖಂಡರು ಮಾಧ್ಯಮಗೋಷ್ಠಿ ನಡೆಸಲಿದ್ದಾರೆ. ಬಿಜೆಪಿ ಸರ್ಕಾರದ ‘ರೈತ ವಿರೋಧಿ ಕ್ರಮ’ಗಳನ್ನು ಈ ಮಾಧ್ಯಮಗೋಷ್ಠಿಯಲ್ಲಿ ವಿವರಿಸಲಾಗುವುದು ಎಂದು ಎಸ್‌ಕೆಎಂ ಹೇಳಿದೆ.

ವಿಧಾನಸಭೆಗೆ ಚುನಾವಣೆ ನಡೆಯಲಿರುವ ಉತ್ತರಾಖಂಡ ಮತ್ತು ಪಂಜಾಬ್‌ ಸೇರಿ ಇತರ ರಾಜ್ಯಗಳಲ್ಲಿಯೂ ಅಭಿಯಾನ ನಡೆಯಲಿದೆ.

ಎಸ್‌ಕೆಎಂ ಜತೆಗೆ ಗುರುತಿಸಿಕೊಂಡಿರುವ ಹರಿಯಾಣದ ರೈತ ಸಂಘಟನೆಗಳ ಸದಸ್ಯರು ಉತ್ತರ ಪ್ರದೇಶಕ್ಕೆ ಬಂದು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಟಿಕಾಯತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.