ADVERTISEMENT

ಮೇಘಾಲಯ ಮುಖ್ಯಮಂತ್ರಿ ಕಚೇರಿ ಮೇಲೆ ಗುಂಪು ದಾಳಿ, 5 ಪೊಲೀಸರಿಗೆ ಗಾಯ

ಪಿಟಿಐ
Published 24 ಜುಲೈ 2023, 20:09 IST
Last Updated 24 ಜುಲೈ 2023, 20:09 IST
ಮೇಘಾಲಯ ಮುಖ್ಯಮಂತ್ರಿಯಾಗಿ ಕಾನ್ರಾಡ್‌ ಸಂಗ್ಮಾ
ಮೇಘಾಲಯ ಮುಖ್ಯಮಂತ್ರಿಯಾಗಿ ಕಾನ್ರಾಡ್‌ ಸಂಗ್ಮಾ    

ಶಿಲ್ಲಾಂಗ್: ಪಶ್ಚಿಮ ಮೇಘಾಲಯದ ತುರ ಪಟ್ಟಣದಲ್ಲಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ಕಚೇರಿಗೆ ನುಗ್ಗಿದ ಗುಂಪೊಂದು ದಾಂದಲೆ ಮಾಡಿದ್ದು, ಈ ಸಂದರ್ಭದಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ.

ತುರ ಅನ್ನು ರಾಜ್ಯದ ಚಳಿಗಾಲದ ರಾಜಧಾನಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ಗರೊ ಹಿಲ್ಸ್‌ ರಾಜ್ಯ ಜನಾಂದೋಲನ ಸಮಿತಿ (ಜಿಎಚ್‌ಎಸ್ಎಂಸಿ) ಮತ್ತು ಎಸಿಎಚ್‌ಐಕೆ ಪ್ರತಿನಿಧಿಗಳ ಜೊತೆಗೆ ಚರ್ಚಿಸುವಾಗಲೇ ದಾಂದಲೆ ನಡೆದಿದೆ.

ಸಂಗ್ಮಾ ಅವರಿಗೆ ಯಾವುದೇ ಪೆಟ್ಟಾಗಿಲ್ಲ. ಕಚೇರಿಯನ್ನು ನೂರಕ್ಕೂ ಅಧಿಕ ಸಂಖ್ಯೆಯ ಪ್ರತಿಭಟನಕಾರರು ಸುತ್ತುವರಿದಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಪಟ್ಟಣದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಲ್ಲು ತೂರಾಟದಿಂದ ಗಾಯಗೊಂಡಿರುವ ಭದ್ರತಾ ಸಿಬ್ಬಂದಿಗೆ ಮುಖ್ಯಮಂತ್ರಿ ಅವರು ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಗುಂಪು ಪ್ರತಿಭಟನೆಗೆ ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದರು ಎಂದು ಸಿ.ಎಂ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಸಿವಿಲ್ ಸೊಸೈಟಿ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಮೂರು ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಚರ್ಚಿಸಿದರು. ಒಂದು ಹಂತದಲ್ಲಿ ಚರ್ಚೆ ನಡೆದಿರುವಂತೆಯೇ ಗುಂಪಿನಲ್ಲಿದ್ದ ಕೆಲವರು ಕಲ್ಲು ತೂರಾಟದಲ್ಲಿ ತೊಡಗಿದರು. ಕಲ್ಲು ತೂರಾಟ ನಡೆಸಿದವರು ಪ್ರತಿಭಟನನಿರತ ಗುಂಪಿನ ಭಾಗವಾಗಿರಲಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಚಳಿಗಾಲದ ರಾಜಧಾನಿ ಮಾಡಬೇಕು ಎಂದು ಒತ್ತಾಯಿಸಿ ತುರ ಪಟ್ಟಣದ ವಿವಿಧೆಡೆ ಟೈರ್‌ ಸುಟ್ಟು ಪ್ರತಿಭಟನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಳಿಗಾಲದ ರಾಜಧಾನಿ, ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮುಂದಿನ ತಿಂಗಳು ರಾಜ್ಯ ರಾಜಧಾನಿಯಲ್ಲಿ ಸಭೆ ನಡೆಸಲಿದ್ದು, ಪ್ರತಿಭಟನೆ ವಾಪಸು ಪಡೆಯಬೇಕು ಎಂದು ಮುಖ್ಯಮಂತ್ರಿ ಈ ಹಿಂದೆ ವಿನಂತಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.