ADVERTISEMENT

ರಾಜಕೀಯಕ್ಕಾಗಿ ದೇಶ ದುರ್ಬಲಗೊಳಿಸದಿರಿ: ನರೇಂದ್ರ ಮೋದಿ

ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:06 IST
Last Updated 1 ಮಾರ್ಚ್ 2019, 20:06 IST
ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದರು –ಪಿಟಿಐ ಚಿತ್ರ
ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದರು –ಪಿಟಿಐ ಚಿತ್ರ   

ಕನ್ಯಾಕುಮಾರಿ:‘ರಾಜಕೀಯ ಕಾರಣಗಳಿಗಾಗಿ ದೇಶವನ್ನು ದುರ್ಬಲಗೊಳಿಸುವಂತಹ ಕೆಲಸ ಮಾಡಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೋದಿ ಮುಂದೆ ಅಧಿಕಾರದಲ್ಲಿರದಿರಬಹುದು. ಆದರೆ, ಭಾರತ ಇದ್ದೇ ಇರುತ್ತದೆ. ನಿಮ್ಮ ರಾಜಕೀಯವನ್ನು ಬಲಪಡಿಸುವುದಕ್ಕಾಗಿ ದೇಶ ದುರ್ಬಲಗೊಳಿಸುವುದು ಬೇಡ’ ಎಂದು ಹೇಳಿದರು.

‘ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಕೆಲವು ರಾಜಕೀಯ ಪಕ್ಷಗಳು ಅನುಮಾನದಿಂದ ನೋಡುತ್ತಿವೆ. ಇಂಥವರೇ ಪಾಕಿಸ್ತಾನ ಪರವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಪಾಕಿಸ್ತಾನದ ಸಂಸತ್‌ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿವೆ. ನೀವು ನಮ್ಮ ಸೇನಾ ಪಡೆಗಳನ್ನು ಅನುಮಾನದಿಂದ ನೋಡುತ್ತಿರುವಿರೋ ಅಥವಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವಿರೋ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

ಭ್ರಷ್ಟರ ವಿರುದ್ಧ ಕ್ರಮ:‘ಕೆಲವರು ಭ್ರಷ್ಟಾಚಾರ ನಡೆಸುವುದನ್ನೇ ಜೀವನದ ವಿಧಾನವನ್ನಾಗಿಸಿಕೊಂಡಿದ್ದಾರೆ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ. ಭ್ರಷ್ಟಾಚಾರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಅದರ ಜೊತೆಗೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡುತ್ತೇವೆ’ ಎಂದು ಮೋದಿ ಹೇಳಿದರು.

‘ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ರೈತರಿಗೆ ₹7.5 ಲಕ್ಷ ಕೋಟಿ ನೀಡಿದ್ದೇವೆ’ ಎಂದು ತಿಳಿಸಿದರು.

‘ಕರಾವಳಿ ರಾಜ್ಯವಾದ ತಮಿಳುನಾಡಿನಲ್ಲಿ ಮೀನುಗಾರಿಕಾ ವಲಯ ಬಲಿಷ್ಠವಾಗಿದೆ. ಹೀಗಾಗಿ, ಮೀನುಗಾರಿಕೆಗಾಗಿ ಹೊಸ ಇಲಾಖೆಯನ್ನು ಪ್ರಾರಂಭಿಸುವ ಮೂಲಕ ಎನ್‌ಡಿಎ ಸರ್ಕಾರವು ಮೀನುಗಾರರನ್ನು ಗೌರವಿಸುವ ಕೆಲಸ ಮಾಡಿದೆ’ ಎಂದು ಹೇಳಿದರು.

‘ದೇಶದ ಮೊದಲ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನವರು ಎಂಬುದು ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:‘ತಮ್ಮ ವಂಶ ಹಾಗೂ ಸ್ನೇಹಿತರಿಗೆ ನೆರವು ನೀಡುವುದೇ ಕಾಂಗ್ರೆಸ್‌ನ ಆರ್ಥಿಕ ನೀತಿಯಾಗಿತ್ತು. ಜನಸಾಮಾನ್ಯರ ಕಲ್ಯಾಣದ ಕಡೆಗೆ ಗಮನ ಕೊಡಲೇ ಇಲ್ಲ’ ಎಂದು ಅವರು ದೂರಿದರು.

‘ಕಾಂಗ್ರೆಸ್‌ ನೀತಿಗಳ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದವರು ತಮಿಳುನಾಡಿನ ಸಿ. ರಾಜಗೋಪಾಲಚಾರಿ. ರಾಜಾಜಿಯವರ ದೂರದೃಷ್ಟಿಯನ್ನು ಅನುಸರಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಪ್ರಧಾನಿ ಹೇಳಿದರು.

‘ಸಾಲ ಮನ್ನಾ ಅಧಿಕ ವರ್ಷದಂತೆ’
‘ಅಧಿಕ ವರ್ಷ ಬರುವುದು ಮತ್ತು ಫುಟ್‌ಬಾಲ್‌ ವಿಶ್ವಕಪ್‌ ನಡೆಯುವುದು ನಾಲ್ಕು ವರ್ಷಕ್ಕೊಮ್ಮೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಸೌಲಭ್ಯ ಪಡೆದವರ ಸ್ಥಿತಿಯೂ ಹೀಗೆ ಇದೆ. ಚುನಾವಣೆಗೆ ಮುನ್ನ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಘೋಷಿಸುತ್ತದೆ. ಅದೂ, ಹತ್ತು ವರ್ಷಗಳಲ್ಲಿ ಒಮ್ಮೆ ಮಾತ್ರ. ಹೀಗಾಗಿ, ಕಾಂಗ್ರೆಸ್‌ನಿಂದ ಸಾಲಮನ್ನಾ ಸೌಲಭ್ಯ ಪಡೆದ ರೈತರ ಸಂಖ್ಯೆ ತೀರಾ ಕಡಿಮೆ ಇದೆ’ ಎಂದು ಮೋದಿ ಹೇಳಿದರು.

* ನನ್ನದು 130 ಕೋಟಿ ಭಾರತೀಯರಿರುವ ಕುಟುಂಬ. ಈ ಕುಟುಂಬಕ್ಕಾಗಿಯೇ ನಾನು ಬದುಕುತ್ತಿದ್ದೇನೆ. ಸಾಯಲೂ ಸಿದ್ಧವಿದ್ದೇನೆ

ನರೇಂದ್ರ ಮೋದಿ,ಪ್ರಧಾನಿ

ಪ್ರಧಾನಿ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ ವೈಕೊ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು –ಪಿಟಿಐ ಚಿತ್ರ

ಕಪ್ಪುಬಾವುಟ ಪ್ರದರ್ಶನ: ವೈಕೊ ಬಂಧನ
ಪ್ರಧಾನಿ ನರೇಂದ್ರ ಮೋದಿಯವರ ತಮಿಳುನಾಡು ಭೇಟಿ ವಿರೋಧಿಸಿ ಕಪ್ಪುಬಾವುಟ ಪ್ರದರ್ಶಿಸಿದ ಎಂಡಿಎಂಕೆ ನಾಯಕ ವೈಕೊ ಮತ್ತು ಅವರ ಬೆಂಬಲಿಗರನ್ನು ಶುಕ್ರವಾರ ಪೊಲೀಸರು ಬಂಧಿಸಿದರು.

ಈ ವೇಳೆ, ಎಂಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಪರಸ್ಪರರ ವಿರುದ್ಧ ಕಲ್ಲು ತೂರಾಟ ನಡೆಸಿದರು.

ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಯ ಗಡಿಯಲ್ಲಿ ಶುಕ್ರವಾರ ಭಾಷಣ ಮಾಡಿದ ವೈಕೊ, ‘ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರಸರ್ಕಾರವು ತಮಿಳುನಾಡಿಗೆ ವಿಶ್ವಾಸದ್ರೋಹ ಎಸಗಿದೆ. ಹೀಗಾಗಿ, ಪ್ರಧಾನಿ ಭೇಟಿಯನ್ನು ನಾವು ವಿರೋಧಿಸುತ್ತಿದ್ದೇವೆ’ ಎಂದೂ ಅವರು ಹೇಳಿದರು.

‘ಮೋದಿ ಹಿಂದಿರುಗಿ ಹೋಗಿ, ತಮಿಳರಿಗೆ ನೀವು ವಿಶ್ವಾಸದ್ರೋಹ ಎಸಗಿದ್ದೀರಿ’ ಎಂಬ ಬರಹವುಳ್ಳ ಭಿತ್ತಿಪತ್ರಗಳನ್ನು ಎಂಡಿಎಂಕೆ ಕಾರ್ಯಕರ್ತರು ಪ್ರದರ್ಶಿಸಿದರು.

ಎಂಡಿಎಂಕೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಮುಖಂಡರ ಅಭಿಪ್ರಾಯಗಳು

‘ಪ್ರಚಾರದಿಂದ ಐದು ನಿಮಿಷವೂ ದೂರ ಇರದ ಮೋದಿ’

ಸಾರ್ವಜನಿಕರನ್ನು ಆಕರ್ಷಿಸುವ, ಭಾಷಣ ಮಾಡುವ ಅಥವಾ ಪ್ರಚಾರದಿಂದ ಪ್ರಧಾನಿ ನರೇಂದ್ರ ಮೋದಿ ಐದು ನಿಮಿಷವೂ ದೂರ ಇರಲಾರರು.

ಪುಲ್ವಾಮಾ ದಾಳಿ ನಂತರ ದೇಶವು ಒಗ್ಗೂಡಿದೆ ಎಂದು ನಮ್ಮ ಪ್ರಧಾನಿಯವರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಆದರೆ, ಮರುಕ್ಷಣದಲ್ಲಿಯೇ ಅವರು ಕಾಂಗ್ರೆಸ್‌ ವಿರುದ್ಧ ದಾಳಿ ನಡೆಸುತ್ತಾರೆ.

ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

‘ನಿರ್ದಿಷ್ಟ ದಾಳಿ: ಶಂಕೆ ನಾಚಿಕೆಗೇಡು’

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು, ಸಾಕ್ಷ್ಯ ಕೇಳಿರುವುದು ನಾಚಿಕೆಗೇಡಿನ ವಿಷಯ.

ಇಡೀ ದೇಶ ನಮ್ಮ ಸೇನಾ ಪಡೆಗಳ ಬೆಂಬಲಕ್ಕೆ ನಿಂತಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಮಮತಾ ಈ ರೀತಿ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡನಾರ್ಹ.

–ಕೈಲಾಶ್‌ ವಿಜಯವರ್ಗೀಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

‘ಕೆಸಿಆರ್ ಪಾತ್ರ ನಿರ್ಣಾಯಕ’

ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಪಕ್ಷಗಳು ಸರ್ಕಾರ ರಚಿಸಲಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳ ಪೈಕಿ 16ರಲ್ಲಿ ಟಿಆರ್‌ಎಸ್‌ ಗೆಲ್ಲುವ ವಿಶ್ವಾಸವಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಜೊತೆ ಗುರುತಿಸಿಕೊಳ್ಳದ ಯಾವುದೇ ಪಕ್ಷಗಳ ಜೊತೆಗೆ ಮಾತನಾಡಲು ನಾವು ತಯಾರಿದ್ದೇವೆ. ಕೆಸಿಆರ್‌ ವೈಯಕ್ತಿಕ ಕಾರ್ಯಸೂಚಿ ಇಲ್ಲದೇ ಒಕ್ಕೂಟ ರಚಿಸಲು ಮುಂದಾದರೆ ಹಲವು ಪಕ್ಷಗಳು ಕೈಜೋಡಿಸುವ ವಿಶ್ವಾಸವಿದೆ.

–ಅಬಿದ್‌ ರಸೂಲ್‌ ಖಾನ್‌, ಟಿಆರ್‌ಎಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.