ADVERTISEMENT

ಕಾಶ್ಮೀರ ಪ್ರತಿಭಟನೆ: ಬ್ರಿಟನ್‌ ಪ್ರಧಾನಿ ಜತೆ ಮೋದಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:15 IST
Last Updated 21 ಆಗಸ್ಟ್ 2019, 20:15 IST
ಜಾನ್ಸನ್‌
ಜಾನ್ಸನ್‌   

ನವದೆಹಲಿ: ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದುರಿನಲ್ಲಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಜತೆಗೆ ಮಾತನಾಡಿದ್ದಾರೆ.

ಕಾಶ್ಮೀರದ ವಿಶೇಷಾಧಿಕಾರ ರದ್ದತಿಯನ್ನು ಖಂಡಿಸಿ ಕಾಶ್ಮೀರ ಮತ್ತು ಪಾಕಿಸ್ತಾನದ ಧ್ವಜಗಳನ್ನು ಹಿಡಿದ ನೂರಾರು ಮಂದಿ ರಾಯಭಾರ ಕಚೇರಿ ಎದುರು ಸ್ವಾತಂತ್ರ್ಯ ದಿನದಂದು ಪ್ರತಿಭಟನೆ ನಡೆಸಿದ್ದರು.

ಮಹಿಳೆಯರು ಮತ್ತು ಮಕ್ಕಳ ಮೇಲೆ ಪ್ರತಿಭಟನಕಾರರು ಬಾಟಲಿ ಮತ್ತು ಮೊಟ್ಟೆಗಳನ್ನು ಎಸೆದಿದ್ದರು. ಆದರೆ, ಅದನ್ನು ತಡೆಯಲು ಅಧಿಕಾರಿಗಳು ಏನನ್ನೂ ಮಾಡಿರಲಿಲ್ಲ ಎಂದು ಮೋದಿ ಪರ ಇರುವವರು ಆರೋಪಿಸಿದ್ದರು.

ADVERTISEMENT

ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಮುಂದಕ್ಕೆ ತರಲು ಹಿಂಸಾತ್ಮಕ ದಾರಿಗಳನ್ನು ಹಿಡಿಯುತ್ತಿದ್ದಾರೆ ಎಂದು ಆಗಸ್ಟ್ 15ರಂದು ನಡೆದ ದಾಂದಲೆಯನ್ನು ಉಲ್ಲೇಖಿಸಿ ಜಾನ್ಸನ್‌ ಅವರಿಗೆ ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಜಾನ್ಸನ್‌ ಅವರು ಅಂದಿನ ದಾಂದಲೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಹೈಕಮಿಷನ್‌, ಅದರ ಸಿಬ್ಬಂದಿ ಹಾಗೂ ಸಂದರ್ಶಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರತಿಭಟನೆ ಮತ್ತು ದಾಂದಲೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಲಂಡನ್‌ ಪೊಲೀಸರು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.