ADVERTISEMENT

ಪ್ರತಿ ಭಾರತೀಯನೂ ಮೂರು ಸಂಕಲ್ಪ ಮಾಡಬೇಕು ಎಂದ ಮೋದಿ: ಅವು ಯಾವುವು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2021, 13:17 IST
Last Updated 13 ಡಿಸೆಂಬರ್ 2021, 13:17 IST
ವಾರಾಣಸಿಯಲ್ಲಿ ನರೇಂದ್ರ ಮೋದಿ
ವಾರಾಣಸಿಯಲ್ಲಿ ನರೇಂದ್ರ ಮೋದಿ    

ವಾರಾಣಸಿ: ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಮೂರು ಸಂಕಲ್ಪಗಳನ್ನು ಭಾರತೀಯರು ಮಾಡಬೇಕಿದೆ. ಸ್ವಚ್ಛತೆ, ಸೃಷ್ಟಿ–ಆವಿಷ್ಕಾರ ಮತ್ತು ನಿರಂತರ ಪ್ರಯತ್ನಗಳೇ ಆ ಮೂರು ಸಂಕಲ್ಪಗಳೆಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಕಾಶಿ ವಿಶ್ವನಾಥ ಧಾಮದ ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಹಿಂದು ಧರ್ಮದರ್ಶಿಗಳನ್ನು ಒಳಗೊಂಡ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ಪ್ರಕಾರ ಪ್ರತಿಯೊಬ್ಬ ಭಾರತೀಯರು ದೇವರ ಭಾಗವೇ. ಹೀಗಾಗಿ, ಅವರ ಬಳಿ ನಾನು ಒಂದು ಕೋರಿಕೆಯನ್ನು ಸಲ್ಲಿಸುತ್ತೇನೆ. ಇದು ನನಗಾಗಿ ಅಲ್ಲ. ದೇಶಕ್ಕಾಗಿ,’ ಎಂದು ಮೋದಿ ಮಾತು ಆರಂಭಿಸಿದರು.

'ಭಾರತೀಯರು ಮೂರು ನಿರ್ಣಯಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಆವಿಷ್ಕಾರ ಮತ್ತು ಸೃಷ್ಟಿ, ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ನಿರಂತರ ಪ್ರಯತ್ನ ನಡೆಸುವ ಸಂಕಲ್ಪವನ್ನು ದೇಶದ ಜನ ತೊಡಬೇಕು,’ ಎಂದು ಅವರು ಹಿಂದೂ ಸಭೆಯಲ್ಲಿ ಹೇಳಿದರು.

ADVERTISEMENT

ಸ್ವಚ್ಛತೆಯು 'ಜೀವನದ ಮಾರ್ಗ'. ಈ ಜೀವನ ಮಾರ್ಗದಲ್ಲಿ, ವಿಶೇಷವಾಗಿ ‘ನಮಾಮಿ ಗಂಗಾ ಮಿಷನ್‌’ನಲ್ಲಿ ಜನರು ಭಾಗವಹಿಸಬೇಕು ಎಂದು ಮೋದಿ ಮನವಿ ಮಾಡಿದರು.

ಎರಡನೇ ಸಂಕಲ್ಪದ ಬಗ್ಗೆ ಮಾತನಾಡಿದ ಮೋದಿ, ‘ಇಂದು, ಈ ಸಾವಿರ ವರ್ಷಗಳಷ್ಟು ಹಳೆಯದಾದ ಕಾಶಿಯಿಂದ, ನಾನು ಪ್ರತಿಯೊಬ್ಬ ದೇಶವಾಸಿಗಳಿಗೆ ಕರೆ ನೀಡುತ್ತೇನೆ. ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಿ, ಹೊಸದನ್ನು ರಚಿಸಿ, ಸೃಷ್ಟಿ ಮಾಡಿ. ಅದನ್ನು ನವೀನ ರೀತಿಯಲ್ಲಿ ಮಾಡಿ,’ ಎಂದು ಉತ್ಪಾದಕತೆಯ ಅಗತ್ಯವನ್ನು ಪ್ರತಿಪಾದಿಸಿದರು.

ಆತ್ಮನಿರ್ಭರ ಭಾರತದತ್ತ ಪ್ರಯತ್ನಗಳನ್ನು ತೀವ್ರಗೊಳಿಸಲು ಮೂರನೇ ನಿರ್ಣಯ ಅಗತ್ಯ ಎಂದು ಮೋದಿ ಹೇಳಿದರು. ‘ಭಾರತವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಹೊತ್ತಿಗೆ, ದೇಶ ಹೀಗಿರಬೇಕು ಎಂಬುದರ ನಿಟ್ಟಿನಲ್ಲಿ ನಾವು ಈಗಿನಿಂದಲೇ ಕೆಲಸ ಮಾಡಬೇಕು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.