ADVERTISEMENT

ಮಣಿಪುರಕ್ಕೆ ಇಂದು ಮೋದಿ: ₹ 8500 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ

ಪಿಟಿಐ
Published 12 ಸೆಪ್ಟೆಂಬರ್ 2025, 23:07 IST
Last Updated 12 ಸೆಪ್ಟೆಂಬರ್ 2025, 23:07 IST
   

ಇಂಫಾಲ: ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭಗೊಂಡು ಎರಡಕ್ಕೂ ಹೆಚ್ಚು ವರ್ಷಗಳ ಬಳಿಕ ಅಲ್ಲಿಗೆ ಶನಿವಾರ ಭೇಟಿ ಕೊಡಲಿದ್ದಾರೆ. 

ಅಲ್ಲಿ ಅಂದಾಜು ₹8,500 ಕೋಟಿ ಮೊತ್ತದ 31 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ.  

ಮಣಿಪುರದಲ್ಲಿ ಬುಡಕಟ್ಟು ಕುಕಿ ಸಮುದಾಯ ಮತ್ತು ಮೈತೇಯಿ ಸಮುದಾಯದ ನಡುವೆ 2023ರಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ ಸುಮಾರು 260 ಮಂದಿ ಮೃತಪಟ್ಟಿದ್ದರು. ಇಷ್ಟೆಲ್ಲಾ ಹಿಂಸಾಚಾರ ನಡೆದರೂ ಪ್ರಧಾನಿ ಮೋದಿ ಅವರು ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ಮನಸ್ಸು ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಪದೇ ಪದೇ ಟೀಕೆ ಮಾಡಿದ್ದವು. 

ADVERTISEMENT

ಎರಡು ಕಾರ್ಯಕ್ರಮ:

ಕುಕಿ ಸಮುದಾಯದ ಜನರು ಹೆಚ್ಚಿರುವ ಚುರಾಚಾಂದಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ₹7,300 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ ಮೈತೇಯಿ ಬುಡಕಟ್ಟು ಸಮುದಾಯದವರು ಹೆಚ್ಚಿರುವ ಇಂಫಾಲ್‌ನಲ್ಲಿ ₹1,200 ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ನೆರವೇರಿಸುವರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಅವರು, ಸಂಘರ್ಷದಿಂದ ಸ್ಥಳಾಂತರಗೊಂಡ ಜನರ ಜತೆಗೆ ಸಂವಾದ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಧಾನಿ ಭೇಟಿ ಸಂದರ್ಭಕ್ಕೆ ಅನುಗುಣವಾಗಿ ಮಣಿಪುರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುರಾಚಾಂದಪುರ ಮತ್ತು ಇಂಫಾಲ್‌ ಜಿಲ್ಲಾ ಕೇಂದ್ರಗಳಲ್ಲಿ ಮೋದಿ ಅವರಿಗೆ ಸ್ವಾಗತ ಕೋರುವ ಬೃಹತ್‌ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ರಾಜ್ಯದಲ್ಲಿ ಜನಾಂಗೀಯ ಸಂಘರ್ಷವನ್ನು ಅಂತ್ಯಗೊಳಿಸಿ, ಶಾಂತಿ ಸ್ಥಾಪಿಸುವುದಕ್ಕೆ ಪೂರಕವಾಗಿ ಮಹತ್ವದ ನಿರ್ಧಾರಗಳನ್ನು ಪ್ರಧಾನಿ ಮೋದಿ ಅವರು ಘೋಷಿಸಬೇಕು  ಎಂದು ಕುಕಿ ಮತ್ತು ಮೈತೇಯಿ ಸಮುದಾಯದ ನಾಯಕರು ಬಯಸಿದ್ದಾರೆ.

‘ಜನರ ನೋವು ಕೇಳುವ ಮೋದಿ’: ಬಿಜೆಪಿ ಸಂಸದ

‘ಮಣಿಪುರ ರಾಜ್ಯವು ಜನಾಂಗೀಯ ಸಂಘರ್ಷದ ದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಧಾನಿ ರಾಜ್ಯದ ಜನರ ನೋವನ್ನು ಕೇಳಲು ಬಂದಿಲ್ಲ. ಇದೀಗ ಪ್ರಧಾನಿ ಮೋದಿ ಅವರು ಈ ಕಾರ್ಯ ಮಾಡುತ್ತಿರುವುದು ರಾಜ್ಯದ ಸುಯೋಗವಾಗಿದೆ’ ಎಂದು  ಮಣಿಪುರದ ಬಿಜೆಪಿ ಸಂಸದರಾದ ಲೀಶೆಂಬಾ ಸನಾಜೋಬಾ ಪ್ರತಿಕ್ರಿಯಿಸಿದರು. 

ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುವುದನ್ನು ಕುಕಿ–ಜೊ ಗುಂಪು ಸ್ವಾಗತಿಸಿದ್ದು, ‘ಇದು ಐತಿಹಾಸಿಕ ಮತ್ತು ಅಪರೂಪದ ಸಂದರ್ಭ’ ಎಂದು ಬಣ್ಣಿಸಿದೆ.  ಸುಮಾರು ನಾಲ್ಕು ದಶಕಗಳ ಬಳಿಕ ಈ ಪ್ರದೇಶಕ್ಕೆ ಪ್ರಧಾನಿಯೊಬ್ಬರು ಬರುತ್ತಿದ್ದಾರೆ ಎಂದು ಕುಕಿ–ಜೊ ಕೌನ್ಸಿಲ್‌ ತಿಳಿಸಿದೆ.  

ಬಹಿಷ್ಕಾರ, ಅಸಹಕಾರ:

ಪ್ರಧಾನಿ ಅವರ ಸಭೆ, ಕಾರ್ಯಕ್ರಮಗಳನ್ನು ಕಣಿವೆ ಮೂಲದ ಆರು ಸಶಸ್ತ್ರ ಗುಂಪುಗಳು ಬಹಿಷ್ಕರಿಸಿವೆ. ಮೈತೇಯಿ ಮಹಿಳೆಯರ ‘ಮೀರಾ ಪೈಬಿಸ್‌’ ಗುಂಪು ಅಸಹಕಾರ ವ್ಯಕ್ತಪಡಿಸಿದೆ.

ಮಣಿಪುರದ ಮುಖ್ಯಮಂತ್ರಿಯಾಗಿದ್ದ ಎನ್‌.ಬಿರೇನ್‌ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಫೆಬ್ರುವರಿ ತಿಂಗಳಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. 

ಪ್ರಧಾನಿ ಭೇಟಿ ಕೇವಲ ಸಾಂಕೇತಿಕವಾಗಿದ್ದು ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಮತ್ತು ನ್ಯಾಯ ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿಲ್ಲ
ಕಿಶಮ್‌ ಮೇಘಚಂದ್ರ ಮಣಿಪುರ ಕಾಂಗ್ರೆಸ್‌ ಅಧ್ಯಕ್ಷ

‘ಕೀಲಿಕೈ ಬಾಟಲಿ ತರಬೇಡಿ...’:

ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ಕೀಲಿಕೈ ನೀರಿನ ಬಾಟಲಿ ಕೈಚೀಲ ಕರವಸ್ತ್ರ ಛತ್ರಿ ಲೈಟರ್‌ ಬೆಂಕಿಪೆಟ್ಟಿಗೆ ಬಟ್ಟೆಯ ತುಣುಕು ಚೂಪಾದ ವಸ್ತು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ತರಬಾರದು ಎಂದು ಮಣಿಪುರ ಆಡಳಿತ ಸೂಚನೆ ನೀಡಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ 12 ವರ್ಷದೊಳಗಿನ ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಇರುವವರನ್ನು ಕರೆದುಕೊಂಡು ಬಾರದಂತೆ ಜನರಿಗೆ ಸಲಹೆ ನೀಡಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎರಡೂ ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಪೊಲೀಸ್‌ ಸಿಬ್ಬಂದಿ ಜತೆಗೆ ಕೇಂದ್ರ ಭದ್ರತಾ ಪಡೆಗಳು ಕಾರ್ಯನಿರ್ವಹಿಸಲಿವೆ.

‘ಮೋದಿ ಭೇಟಿ ದೊಡ್ಡ ವಿಷಯವಲ್ಲ’

ಜುನಾಗಢ: ‘ಮತ ಕಳವಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ಪ್ರಮುಖ ವಿಷಯವಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. 

ಗುಜರಾತ್‌ನ ಜುನಾಗಢ ಜಿಲ್ಲೆಯ ಕೆಶೋದ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ‘ಮಣಿಪುರ ತೊಂದರೆಯಲ್ಲಿದೆ ಎನ್ನುವುದು ನಿಜ. ಆದರೆ ಪ್ರಧಾನಿ ಈಗ ಅಲ್ಲಿಗೆ ಹೋಗಲು ನಿರ್ಧರಿಸಿದ್ದಾರೆ. ಅದಕ್ಕಿಂತಲೂ ಸದ್ಯಕ್ಕೆ ‘ಮತ ಕಳವು’ ದೇಶದ ಪ್ರಮುಖ ವಿಷಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.