ADVERTISEMENT

ಭಯದ ಕತ್ತಲೆ ಓಡಿಸುವ ನಿಮ್ಮ ಧೈರ್ಯವೇ ದೇಶದ ಬೆಳಕು: ಯೋಧರೊಂದಿಗೆ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 8:37 IST
Last Updated 7 ನವೆಂಬರ್ 2018, 8:37 IST
   

ಹರ್ಷಿಲ್ (ಉತ್ತರಖಂಡ): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೇನೆ ಮತ್ತು ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಯೋಧರನ್ನು ಅಭಿನಂದಿಸಿದ ಮೋದಿ, ‘ಕರ್ತವ್ಯದ ಕುರಿತ ನಿಮ್ಮ ಬದ್ಧತೆ ಅಭಿನಂದಾನಾರ್ಹ. ನೀವು 125 ಕೋಟಿಭಾರತೀಯರನ್ನು ಮಾತ್ರವೇ ರಕ್ಷಿಸುತ್ತಿಲ್ಲ, ಅವರೆಲ್ಲರ ಕನಸುಗಳನ್ನೂ ಮತ್ತು ಈ ದೇಶದ ಭವಿಷ್ಯವನ್ನೂ ರಕ್ಷಿಸುತ್ತಿದ್ದೀರಿ’ ಎಂದು ಹೇಳಿದರು.

‘ದೀಪಾವಳಿ ಬೆಳಕಿನ ಹಬ್ಬ. ಒಳಿತಿನ ಬೆಳಕು ಹರಡುವ ಮೂಲಕ ಭಯದ ಕತ್ತಲೆಯನ್ನು ಈ ಹಬ್ಬ ದೂರ ಓಡಿಸುತ್ತದೆ. ನಮ್ಮ ಸೈನಿಕರು ತಮ್ಮ ಬದ್ಧತೆಯಿಂದ ದೇಶದ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ದೀಪಾವಳಿ ಹಬ್ಬದಂದು ಸೈನಿಕರ ಜೊತೆಗೆ ಆಚರಿಸುತ್ತಿದ್ದೆ. ಕೈಲಾಸ–ಮಾನಸ ಸರೋವರ ಯಾತ್ರೆಗೆ ಹೋಗಿದ್ದಾಗ ಐಟಿಬಿಪಿ ಸೈನಿಕರೊಡನೆ ಮಾತನಾಡಿದ್ದೆ. ರಕ್ಷಣಾ ವಲಯದಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ನಿವೃತ್ತ ಸೈನಿಕರ ಕ್ಷೇಮಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಒಂದು ಹುದ್ದೆ ಒಂದು ಪಿಂಚಣಿ (ಒನ್ ರ‍್ಯಾಂಕ್ ಒನ್ ಪೆನ್ಷನ್) ಯೋಜನೆಯನ್ನು ಜಾರಿ ಮಾಡಲಾಗಿದೆ’ ಎಂದು ವಿವರಿಸಿದರು.

‘ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ನಮ್ಮ ಸೈನಿಕರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ದೇಶದ ಕೀರ್ತಿ ವಿಶ್ವದೆಲ್ಲೆಡೆ ಹರಡುವಂತೆ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.