ADVERTISEMENT

ನೂತನ ಸಂಸತ್‌ ಭವನದ ಕಟ್ಟಡಕ್ಕೆ ಮೋದಿ ಅಡಿಗಲ್ಲು

ಪಿಟಿಐ
Published 5 ಡಿಸೆಂಬರ್ 2020, 20:30 IST
Last Updated 5 ಡಿಸೆಂಬರ್ 2020, 20:30 IST
ಓಂ ಬಿರ್ಲಾ
ಓಂ ಬಿರ್ಲಾ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನದ ಕಟ್ಟಡಕ್ಕೆ ಇದೇ 10ರಂದು ಅಡಿಗಲ್ಲು ಹಾಕಲಿದ್ದಾರೆ’ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಶನಿವಾರ ತಿಳಿಸಿದ್ದಾರೆ.

64,500 ಚದರ ಮೀಟರ್‌ ವಿಸ್ತೀರ್ಣದ ಈ ಕಟ್ಟ‌ಡ ನಿರ್ಮಾಣಕ್ಕೆ ಸುಮಾರು ₹971 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

‘ಈಗಿನ ಕಟ್ಟಡವು 100 ವರ್ಷಗಳಷ್ಟು ಹಳೆಯದಾಗಿದೆ. ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಮ್ಮವರೇ ತೊಡಗಿಕೊಳ್ಳಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ‘ಆತ್ಮ ನಿರ್ಭರ್‌ ಭಾರತ್‌’ಗೆ ಇದೊಂದು ಸ್ಪಷ್ಟ ಉದಾಹರಣೆಯೂ ಹೌದು. ಹೊಸ ಕಟ್ಟಡವು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ. 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಈ ಕಟ್ಟಡದಲ್ಲಿ ಸಂಸತ್‌ ಕಲಾಪಗಳು ನಡೆಯುವ ವಿಶ್ವಾಸವಿದೆ’ ಎಂದು ಅವರು ನುಡಿದಿದ್ದಾರೆ.

ADVERTISEMENT

‘ಭೂಕಂಪನ ನಿರೋಧಕ ವ್ಯವಸ್ಥೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. 2000 ಮಂದಿ ನೇರವಾಗಿ ಹಾಗೂ 9,000 ಮಂದಿ ಪರೋಕ್ಷವಾಗಿ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಳೆಯ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆಯೂ ನೋಡಿಕೊಳ್ಳಲಾಗುತ್ತದೆ’ ಎಂದೂ ತಿಳಿಸಿದ್ದಾರೆ.

‘ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಲುವಾಗಿ ನೂತನ ಕಟ್ಟಡದಲ್ಲಿ ಭವ್ಯವಾದ ಸಂವಿಧಾನ ಸಭಾಂಗಣ ನಿರ್ಮಿಸಲಾಗುತ್ತದೆ. ಲೋಕಸಭಾ ಹಾಗೂ ರಾಜ್ಯಸಭಾ ಸದನಗಳಲ್ಲಿ ಕ್ರಮವಾಗಿ 888 ಮತ್ತು 384 ಆಸನ ಸಾಮರ್ಥ್ಯ ಹೊಂದಿರಲಿವೆ. ಮುಂದಿನ ದಿನಗಳಲ್ಲಿ ಉಭಯ ಸದನಗಳ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗಬಹುದೆಂಬುದನ್ನು ಗಮನದಲ್ಲಿಟ್ಟುಕೊಂಡು ಆಸನ ಸಾಮರ್ಥ್ಯ ಹೆಚ್ಚಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.