ಮುಂಬೈನ ಬಾಯಕುಲಾದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ತುಂಬಿರುವ ನೀರು
–ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ ವಿವಿಧೆಡೆ ಭಾರಿ ಮಳೆ ಸುರಿಯುತ್ತಿದೆ. ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ, ನೀರು ನುಗ್ಗಿದ್ದ ಪ್ರದೇಶಗಳಿಂದ 48 ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಕಚೇರಿ ತಿಳಿಸಿದೆ.
‘ಪುಣೆ, ಸತಾರ, ಸೊಲ್ಲಾಪುರ, ರಾಯಗಢ, ಮುಂಬೈನಲ್ಲಿ ಭಾರಿ ಮಳೆ ಆಗಿದೆ. ದೌಂಡ್‌ನಲ್ಲಿ 24 ತಾಸುಗಳಲ್ಲಿ 117 ಮಿ.ಮೀ ಮಳೆ ಆಗಿದೆ’ ಎಂದು ಕಚೇರಿಯು ಹೇಳಿದೆ. ಮುಂಬೈನಲ್ಲಿ 24 ತಾಸುಗಳಲ್ಲಿ 135.4 ಮಿ.ಮೀ. ಮಳೆ ಆಗಿದೆ.
ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯಲ್ಲಿ ಮಳೆಯಿಂದಾಗಿ 25 ಮನೆಗಳು ಭಾಗಶಃ ಕುಸಿದಿವೆ. ಪ್ರವಾಹದಲ್ಲಿ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸಲಾಗಿದೆ. ರಾಜ್ಯದ ಕೆಲವೆಡೆ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಮುಂಬೈನಲ್ಲಿ ಯಾವುದೇ ತುರ್ತು ಸಂದರ್ಭವನ್ನು ಎದುರಿಸಲು ಎನ್‌ಡಿಆರ್‌ಎಫ್‌ನ ಐದು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ. ಮುಂದಿನ 24 ಗಂಟೆಗಳಲ್ಲಿ ಮುಂಬೈನಲ್ಲಿ ಇನ್ನಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೆಟ್ರೊ ನಿಲ್ದಾಣದಲ್ಲಿ ನೀರು: ಮುಂಬೈ ಮಹಾನಗರಲ್ಲಿ ಬಿರುಸಿನ ಮಳೆಯ ಕಾರಣಕ್ಕೆ ನೆಲದ ಅಡಿಯಲ್ಲಿರುವ ಆಚಾರ್ಯ ಆತ್ರೇಯ ಚೌಕ ಮೆಟ್ರೊ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದ್ದು, ಅಲ್ಲಿಂದ ವರ್ಲಿವರೆಗಿನ ಮೆಟ್ರೊ ಸಂಚಾರವನ್ನು ಸೋಮವಾರ ಸ್ಥಗಿತಗೊಳಿಸಲಾಗಿತ್ತು.
ನಿಲ್ದಾಣದಲ್ಲಿ ನೀರು ತುಂಬಿಕೊಂಡ ಪ್ರಸಂಗವು ಕಾಮಗಾರಿಯ ಗುಣಮಟ್ಟ ಹಾಗೂ ಮುಂಗಾರು ಮಳೆಯಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಕಳವಳ ಮೂಡುವಂತೆ ಮಾಡಿದೆ.
‘ಇಂದು ಮಳೆಯು ದಿಢೀರನೆ, ಭಾರಿ ಪ್ರಮಾಣದಲ್ಲಿ ಸುರಿದ ಕಾರಣಕ್ಕೆ ಆಚಾರ್ಯ ಆತ್ರೇಯ ಚೌಕ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ನೀರು ಹರಿದುಬಂತು. ನೀರು ಇದ್ದಕ್ಕಿದ್ದಂತೆ ನುಗ್ಗಿದ ಪರಿಣಾಮವಾಗಿ ನೀರನ್ನು ತಡೆಹಿಡಿಯುವ ಗೋಡೆಯು ಕುಸಿದು ಹೀಗಾಗಿದೆ’ ಎಂದು ಮುಂಬೈ ಮೆಟ್ರೊ ಪ್ರಕಟಣೆ ಹೇಳಿದೆ.
ಈ ಮೆಟ್ರೊ ನಿಲ್ದಾಣದ ಪ್ಲ್ಯಾಟ್‌ಫಾರ್ಮ್ ಮೇಲೆ, ನಿಲ್ದಾಣದ ಇತರ ಕೆಲವೆಡೆ ನೀರು ನಿಂತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ನಗರದಲ್ಲಿ ಕೆಲವು ತಾಸುಗಳ ಕಾಲ ಸುರಿದ ಮಳೆಯ ಕಾರಣದಿಂದಾಗಿ ತಗ್ಗುಪ್ರದೇಶದ ಹಲವೆಡೆ ನೀರು ತುಂಬಿಕೊಂಡಿದೆ. ಅಲ್ಲದೆ, ರೈಲು ಮಾರ್ಗಗಳ ಮೇಲೆಯೂ ನೀರು ತುಂಬಿಕೊಂಡು, ರೈಲುಗಳ ಸಂಚಾರಕ್ಕೆ ಅಡ್ಡಿ ಸೃಷ್ಟಿಸಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಕಡೆ ಸಾಗುವ ರೈಲುಗಳು ತಡವಾಗುತ್ತಿವೆ ಎಂದು ಪ್ರಯಾಣಿಕರು ದೂರಿದ್ದರು.
15 ದಿನ ಮೊದಲೇ ಬಂದ ಮುಂಗಾರು: ನೈಋತ್ಯ ಮುಂಗಾರು ಮುಂಬೈ ಮಹಾನಗರವನ್ನು ಸೋಮವಾರ ಪ್ರವೇಶಿಸಿದೆ. ಕಳೆದ 75 ವರ್ಷಗಳ ಇತಿಹಾಸದಲ್ಲಿ, ದೇಶದ ಆರ್ಥಿಕ ರಾಜಧಾನಿಯಾದ ಮುಂಬೈಗೆ ಮುಂಗಾರು ಇಷ್ಟು ಬೇಗ ಪ್ರವೇಶಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ಹೇಳಿದ್ದಾರೆ.
ನೈಋತ್ಯ ಮುಂಗಾರು ಮಾರುತಗಳು ಮುಂಬೈಗೆ ವಾಡಿಕೆಗಿಂತ ಹದಿನೈದು ದಿನ ಮೊದಲೇ ಬಂದಿವೆ. ಇಲ್ಲಿಗೆ ಮುಂಗಾರು ಸಾಮಾನ್ಯವಾಗಿ ಜೂನ್ 11ರಂದು ಪ್ರವೇಶಿಸುತ್ತದೆ. 1956, 1962 ಹಾಗೂ 1971ರಲ್ಲಿ ಮುಂಗಾರು ಮೇ 29ರಂದು ಪ್ರವೇಶಿಸಿತ್ತು. ಮುಂಗಾರು ಮಾರುತಗಳು ಪುಣೆ ನಗರವನ್ನೂ ಸೋಮವಾರ ಪ್ರವೇಶಿಸಿವೆ.
ಮಾಜಿ ಶಾಸಕ ಸಾವು: ಲಾತೂರ್ ಜಿಲ್ಲೆಯ ಲಾತೂರ್–ತುಳಜಾಪುರ ರಸ್ತೆಯಲ್ಲಿ ಮಳೆಯ ಕಾರಣದಿಂದಾಗಿ ಕಾರು ಸ್ಕಿಡ್ ಆಗಿ ಮಾಜಿ ಶಾಸಕ ಆರ್.ಟಿ. ಜಿಜಾ ದೇಶಮುಖ್ ಅವರು ಮೃತಪಟ್ಟಿದ್ದಾರೆ. ದೇಶಮುಖ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಅಪಘಾತದಲ್ಲಿ ಗಾಯಗೊಂಡಿದ್ದ ದೇಶಮುಖ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಕೋಲ್ಕತ್ತ ನಗರ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳಲ್ಲಿ ಸೋಮವಾರ ಹಗುರದಿಂದ ಸಾಧಾರಣವಾದ ಮಳೆ ಆಗಿದೆ. ಇದು ನೈಋತ್ಯ ಮುಂಗಾರು ಪ್ರವೇಶದ ಸೂಚನೆ ಎಂದು ಹವಾಮಾನ ಇಲಾಖೆ ಹೇಳಿದೆ
ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಬುಧವಾರದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ
ಮಹಾರಾಷ್ಟ್ರದ ಠಾಣೆ ಮತ್ತು ಪಾಲಘರ್ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ ಸುರಿದಿದೆ. ಮಳೆಯಿಂದ ತೊಂದರೆಗೆ ಒಳಗಾಗಬಹುದಾದ ಸ್ಥಳಗಳಿಂದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿನ ಪ್ರವಾಸಿ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಈ ಜಿಲ್ಲೆಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ
ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆಯೇ ಇಲ್ಲದಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಮಳೆಗೆ ಮುಂಬೈ ಕುಸಿದುಬಿದ್ದಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಬಿಜೆಪಿಯ ನಿಯಂತ್ರಣದಲ್ಲಿರುವುದರ ಪರಿಣಾಮವನ್ನು ಇಂದು ದಕ್ಷಿಣ ಮತ್ತು ಕೇಂದ್ರ ಮುಂಬೈ ಎದುರಿಸಿವೆ.– ಆದಿತ್ಯ ಠಾಕ್ರೆ ಶಿವಸೇನಾ (ಯುಬಿಟಿ) ಶಾಸಕ
ಬಿಎಂಸಿಯು ಮುಂಬೈನ ರಸ್ತೆಗಳಿಗಾಗಿ ₹3 ಲಕ್ಷ ಕೋಟಿ ವೆಚ್ಚ ಮಾಡಿದ್ದನ್ನು ಶಿವಸೇನಾ (ಯುಬಿಟಿ) ಮತ್ತು ಬಿಎಂಸಿ ಗುತ್ತಿಗೆದಾರರು ಲೂಟಿ ಮಾಡಿದ್ದಾರೆ... ಮಿಥಿ ನದಿ ಸ್ವಚ್ಛಗೊಳಿಸುವ ಬೋಗಸ್ ಕೆಲಸಕ್ಕೆ ₹1000 ಕೋಟಿ ವೆಚ್ಚ ಮಾಡಲಾಗಿದೆ.– ಆಶಿಷ್ ಶೆಲಾರ್ ಮಹಾರಾಷ್ಟ್ರ ಸಚಿವ
ಆಚಾರ್ಯ ಆತ್ರೇಯ ನಿಲ್ದಾಣವನ್ನು ಮುಚ್ಚಲಾಗಿದೆ. ನೀರು ತುಂಬಿಕೊಂಡಿರುವ ನೆಲದ ಅಡಿಯ ನಿಲ್ದಾಣವು ಎಷ್ಟು ಅಪಾಯಕಾರಿ ಇದನ್ನು ಮಹಾಯುತಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯೇ? ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ?– ಪ್ರೊ. ವರ್ಷಾ ಗಾಯಕ್ವಾಡ್ ಕಾಂಗ್ರೆಸ್ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.