ADVERTISEMENT

ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ ಮೊರೆ

ಪಿಟಿಐ
Published 25 ಜುಲೈ 2023, 9:54 IST
Last Updated 25 ಜುಲೈ 2023, 9:54 IST
   

ಲಖನೌ: ವಾರಾಣಸಿಯ ಜ್ಙಾನವಾಪಿ ಮಸೀದಿ ಸೇರಿದಂತೆ 22 ‌ಮಸೀದಿಗಳ ಮೇಲ್ವಿಚಾರಣೆ ನಡೆಸುತ್ತಿರುವ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯು ಜ್ಙಾನವಾಪಿ ಮಸೀದಿಯ ವೈಜ್ಞಾನಿಕ ಪರೀಕ್ಷೆಗೆ ಜಿಲ್ಲಾ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದೆ.

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿ ವಾರಾಣಸಿ ನ್ಯಾಯಾಲಯ ಶುಕ್ರವಾರ(ಜುಲೈ.21) ಮಹತ್ವದ ಆದೇಶ ನೀಡಿತ್ತು.

ಬಳಿಕ, ಸುಪ್ರೀಂ ಕೋರ್ಟ್, ವಾರಾಣಸಿ ನ್ಯಾಯಾಲಯದ ಆದೇಶವನ್ನು ಜುಲೈ 26ರ ಸಂಜೆ 5 ಗಂಟೆಯವರೆಗೆ ಜಾರಿಗೊಳಿಸಬಾರದು. ಇದರಿಂದಾಗಿ ಮಸೀದಿ ಸಮಿತಿಯು ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಸಮಯಾವಕಾಶ ಸಿಗುತ್ತದೆ ಎಂದು ಸೋಮವಾರ ನಿರ್ದೇಶಿಸಿತ್ತು.

ADVERTISEMENT

ಜುಲೈ 24ರಂದು ಈ ಕುರಿತಂತೆ ಆದೇಶ ನೀಡಿದ್ದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಅದರ ಮಧ್ಯಂತರ ಆದೇಶವು ಜುಲೈ 26ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲು ಮಸೀದಿಯ ಅರ್ಜಿಯ ವಿಚಾರಣೆಗೆ ಅವಕಾಶ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಕೋರಿತ್ತು.

16ನೇ ಶತಮಾನದಲ್ಲಿ ಮಸೀದಿ ನಿರ್ಮಿಸಿರುವ ಸ್ಥಳದಲ್ಲಿ ಈ ಮೊದಲು ದೇವಾಲಯವಿತ್ತೇ ಎಂಬುದನ್ನು ಪತ್ತೆ ಮಾಡಲು ಉತ್ಖನನಕ್ಕೆ ವಾರಾಣಾಸಿ ಜಿಲ್ಲಾ ನ್ಯಾಯಾಲಯವು ಅವಕಾಶ ನೀಡಿದ್ದರೂ ಸಹ ಕನಿಷ್ಠ ವಾರದ ಮಟ್ಟಿಗೆ ಉತ್ಖನನ ನಡೆಸದಿರುಲು ನಿರ್ಧರಿಸಿರುವುದಾಗಿ ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ(ಎಎಸ್‌ಐ) ಪರವಾಗಿ ನೀಡಲಾದ ಹೇಳಿಕೆಯನ್ನು ತ್ರಿಸದಸ್ಯ ಪೀಠವು ಗಣನೆಗೆ ತೆಗೆದುಕೊಂಡಿತ್ತು,

ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಮಸೀದಿ ಸಮಿತಿ ಮನವಿ ಸಲ್ಲಿಸಿದ ಸಂದರ್ಭ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಎಸ್‌ಐ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಕಾಶಿ ವಿಶ್ವನಾಥ ದೇವಾಲಯ ಪಕ್ಕದಲ್ಲಿರುವ ಮಸೀದಿ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಜುಲೈ 21ರಂದು ನಾಲ್ವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.