ADVERTISEMENT

ಸಂಬಂಧದಲ್ಲಿ ಬಿರುಕು ಉಂಟಾದಾಗ ಅತ್ಯಾಚಾರ ಎನ್ನುತ್ತಾರೆ: ಹರಿಯಾಣ ಸಿ.ಎಂ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 8:52 IST
Last Updated 18 ನವೆಂಬರ್ 2018, 8:52 IST
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್   

ಕಲ್ಕ (ಹರಿಯಾಣ): ‘ಬಹುತೇಕ ಅತ್ಯಾಚಾರ ಪ್ರಕರಣಗಳು ಒಪ್ಪಿತರ ಸಂಬಂಧಗಳೇ ಆಗಿರುತ್ತವೇ. ಸಂಬಂಧದಲ್ಲಿ ಬಿರುಕು ಉಂಟಾದಾಗಅತ್ಯಾಚಾರ ಆರೋಪ ಹೊರಿಸುತ್ತಾರೆ’ ಎನ್ನುವ ಮೂಲಕ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳೇನು ಹೆಚ್ಚಾಗಿಲ್ಲ. ಹಿಂದೆಯೂ ನಡೆಯುತ್ತಿದ್ದವು ಈಗಲೂ ಆಗುತ್ತಿವೆ. ಆದರೆ, ಈಗ ಆ ಘಟನೆಗಳಿಗೆ ಪ್ರಾಮುಖ್ಯತೆ ನೀಡುವುದು ಹೆಚ್ಚಾಗಿದೆ ಅಷ್ಟೇ’ ಎಂದು ಹೇಳಿದ್ದಾರೆ.

ಶೇ 80 ರಿಂದ 90ರಷ್ಟು ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿಸಂತ್ರಸ್ತ ಮಹಿಳೆ ಮತ್ತು ಆರೋಪಿ ಪರಸ್ಪರ ಪರಿಚಿತರಾಗಿರುತ್ತಾರೆ. ಅಲ್ಲದೆ, ಸಾಕಷ್ಟು ಪ್ರಕರಣಗಳಲ್ಲಿ ಇಬ್ಬರೂ ಬಹಳ ವರ್ಷಗಳಿಂದಲೂ ಪರಿಚಿತರಾಗಿರುತ್ತಾರೆ. ಯಾವಾಗ ಸಂಬಂಧದಲ್ಲಿ ಜಗಳ ಉಂಟಾಗುತ್ತದೆಯೋ ಆಗ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯರು ಎಫ್‌ಐಆರ್‌ ದಾಖಲಿಸುತ್ತಾರೆ’ ಎಂದಿದ್ದಾರೆ.

ADVERTISEMENT

ಖಟ್ಟರ್‌ ಅವರ ಮಾತಿಗೆ ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌ ಮುಖಂಡ ರಣ್‌ದೀಪ್‌ ಸಿಂಗ್ ಸುರ್ಜೆವಾಲ, ‘ಖಟ್ಟರ್‌ ನೇತೃತ್ವದ ಸರ್ಕಾರ ಮಹಿಳಾ ವಿರೋಧಿ ಮನೋಭಾವ ಹೊಂದಿದೆ ಎಂಬುದು ಅವರ ಮಾತಿನಿಂದಲೇ ಬಹಿರಂಗಗೊಂಡಿದೆ. ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮಹಿಳೆಯರ ವಿರುದ್ಧ ಆರೋಪ ಮಾಡುತ್ತಿದೆ’ ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ‘ಮಹಿಳಾ ವಿರೋಧಿ ಧೋರಣೆ ಹೊಂದಿರುವ ಮುಖ್ಯಮಂತ್ರಿಯಿರುವ ರಾಜ್ಯದಲ್ಲಿ ಮಹಿಳೆಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ’ ಎಂದು ಟೀಕಿಸಿದ್ದಾರೆ.

ಹೀಗೆ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯ ಬಗ್ಗೆಖಟ್ಟರ್ ಅವರು ಆರೋಪ ಹೊರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ, ‘ಅತ್ಯಾಚಾರ ಘಟನೆಯ ಸತ್ಯಾಸತ್ಯತೆ ಪರಿಶೀಲಿಸದಯೇವಿವಾದ ಎಬ್ಬಿಸಲಾಗುತ್ತದೆ’ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಾಕಷ್ಟು ಆಕ್ರೋಶ ವ್ಯಕ್ತವಾದ ನಂತರ ತಮ್ಮ ಮಾತಿಗೆ ಸ್ಪಷ್ಟನೆ ನೀಡಿರುವ ಖಟ್ಟರ್‌, ‘ತನಿಖೆಯಿಂದ ಬಹಿರಂಗವಾಗಿರುವ ಸತ್ಯಾಂಶವನ್ನೇ ನಾನು ಹೇಳಿದ್ದೇನೆ’ ಎಂದಿದ್ದಾರೆ.

ಅತ್ಯಾಚಾರ ಪ್ರಕರಣಗಳಿಂದಾಗಿ ಹರಿಯಾಣ ಆಗಾಗ ಸುದ್ದಿಯಾಗುತ್ತಲೇ ಇದೆ. ಸೆಪ್ಟೆಂಬರ್ ತಿಂಗಳಲ್ಲಿ ರೇವಾರಿಯಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಪ್ರಕರಣದ ಮೂವರು ಆರೋಪಿಗಳು ಈಗಜೈಲಿನಲ್ಲಿದ್ದಾರೆ.

ಇದೇ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಶಾಲೆಯಿಂದ ಹಿಂತಿರುಗುತ್ತಿದ್ದ 7 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೂಡ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.