ADVERTISEMENT

ಕೃಷ್ಣನ ಚಿತ್ರಕಾರಳ ಮೇಲೆ ಗಲಭೆ ಯತ್ನದ ಪ್ರಕರಣ

ದೇವರ ವರ್ಣಚಿತ್ರ ರಚನೆಯಲ್ಲಿ ಜನಪ್ರಿಯತೆ ಗಳಿಸಿರುವ ಮುಸ್ಲಿಂ ಮಹಿಳೆ ಜಸ್ನಾ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:42 IST
Last Updated 13 ಏಪ್ರಿಲ್ 2025, 15:42 IST
FIR.
FIR.   

ತಿರುವನಂತಪುರ: ಭಗವಾನ್ ಕೃಷ್ಣನ ವರ್ಣಚಿತ್ರ ರಚನೆಯಲ್ಲಿ ಖ್ಯಾತಿ ಗಳಿಸಿರುವ ಮತ್ತು ಕೃಷ್ಣನ ಕಲಾಕೃತಿಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆ ನೀಡಿ ಅವರ ಪ್ರಶಂಸೆ ಗಳಿಸಿದ್ದ ಕೇರಳದ ಮುಸ್ಲಿಂ ಮಹಿಳೆಯೊಬ್ಬರು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಪ್ರಕರಣ ಎದುರಿಸುತ್ತಿದ್ದಾರೆ.

ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ಮುಂದೆ ಭಗವಾನ್ ಕೃಷ್ಣನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿರುವ ದೃಶ್ಯವನ್ನು ವಿಡಿಯೊ ಮಾಡಿರುವುದಕ್ಕೆ ಪೊಲೀಸರು ಅವರ ವಿರುದ್ಧ ಇಂತಹ ಆರೋಪದ ಪ್ರಕರಣ ದಾಖಲಿಸಿದ್ದಾರೆ.  

ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯ ಜಸ್ನಾ ಸಲೀಂ, ಕೇರಳ ಹೈಕೋರ್ಟ್ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ‘ನಾಡಾ ಪಂಡಲ್’ನಲ್ಲಿ (ದೇವಾಲಯದ ಪೀಠ) ವಿಡಿಯೊ ಮಾಡಿರುವ ಆರೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಜಸ್ನಾ ಇತ್ತೀಚೆಗೆ ದೇವಾಲಯದ ಪೀಠದಲ್ಲಿ ಭಗವಾನ್ ಕೃಷ್ಣನ ವಿಗ್ರಹಕ್ಕೆ ಹಾರ ಹಾಕುವ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಸಂಬಂಧ ದೇವಾಲಯದ ಅಧಿಕಾರಿಗಳು ಆಕೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದ ಮತ್ತು ನ್ಯಾಯಾಂಗ ನಿಂದನೆಯ ಆರೋಪದ ಪ್ರಕರಣವನ್ನು ಜಸ್ನಾ ವಿರುದ್ಧ ಗುರುವಾಯೂರ್ ದೇವಾಲಯದ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಜಸ್ನಾ ಈ ಹಿಂದೆ ದೇವಾಲಯದೊಳಗೆ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವಿಡಿಯೊ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆನಂತರ ದೇವಾಲಯದೊಳಗೆ ವಿಡಿಯೊ ಚಿತ್ರೀಕರಣಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.

ಕಳೆದ ಹತ್ತು ವರ್ಷಗಳಿಂದ ಭಗವಾನ್ ಕೃಷ್ಣನ ವರ್ಣಚಿತ್ರಗಳನ್ನು ರಚಿಸುತ್ತಿರುವ ಜಸ್ನಾ, ಮುಸ್ಲಿಮರು ಮತ್ತು ಹಿಂದೂ ಸಂಘಟನೆಗಳೆರಡರಿಂದಲೂ ತೀವ್ರ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆಕೆ ರಚಿಸಿರುವ ವರ್ಣಚಿತ್ರಗಳು ಕಲಾಸಕ್ತರ ಗಮನಸೆಳೆದಿವೆ. ಗುರುವಾಯೂರು ದೇವಾಲಯ ಸೇರಿ ಅನೇಕ ದೇವಾಲಯಗಳಲ್ಲಿ ಆಕೆ ಬಿಡಿಸಿರುವ ವರ್ಣಚಿತ್ರಗಳನ್ನು ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.