ADVERTISEMENT

ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ: ಸೇನೆಯ 30 ಸಿಬ್ಬಂದಿ ವಿರುದ್ಧ ಚಾರ್ಜ್‌ಶೀಟ್

ಪಿಟಿಐ
Published 11 ಜೂನ್ 2022, 16:55 IST
Last Updated 11 ಜೂನ್ 2022, 16:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಡಿಸೆಂಬರ್ 4, 2021 ರಂದು ಮೊನ್ ಜಿಲ್ಲೆಯ ಓಟಿಂಗ್-ತಿರು ಪ್ರದೇಶದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ 13 ನಾಗರಿಕರು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕನಿಷ್ಠ 30 ಸೇನಾ ಸಿಬ್ಬಂದಿ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಸೈನಿಕರ ವಿರುದ್ಧ ಕೊಲೆ ಮತ್ತು ಉದ್ದೇಶಪೂರ್ವಕವಲ್ಲದ ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ವಿಶೇಷ ಪಡೆ ಕಾರ್ಯಾಚರಣೆ ತಂಡವು ಎಸ್‌ಒ‍ಪಿ(ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸದೆ ವಿವೇಚನಾರಹಿತ ಮತ್ತು ಅಸಮಂಜಸವಾದ ಗುಂಡಿನ ದಾಳಿ ನಡೆಸಿದ್ದರಿಂದ ಆರು ನಾಗರಿಕರ ಹತ್ಯೆ ನಡೆದಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

ಚುಮೌಕೆಡಿಮಾ ಪೊಲೀಸ್ ಸಂಕೀರ್ಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗಾಲ್ಯಾಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಟಿ ಜಾನ್ ಲಾಂಗ್‌ಕುಮರ್, ಮೊದಲಿಗೆ ಟಿಜಿತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಡಿಸೆಂಬರ್ 5ರಂದು ರಾಜ್ಯ ಅಪರಾಧ ದಳವು ಭಾರತೀಯ ಸೈನಿಕರ ವಿರುದ್ಧ ಐಪಿಸಿ ಸೆಕ್ಷನ್ 302, 304 ಮತ್ತು 34ರ ಅಡಿ ಪ್ರಕರಣವನ್ನು ಮರು ದಾಖಲಿಸಿಕೊಂಡು ಎಸ್‌ಐಟಿ ತನಿಖೆಗೆ ಒಪ್ಪಿಸಿತ್ತು ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ‘ಎಸ್‌ಐಟಿ ವೃತ್ತಿಪರ ಮತ್ತು ಸಮಗ್ರ ತನಿಖೆ ನಡೆಸಿದೆ’ಎಂದು ಅವರು ಹೇಳಿದ್ದಾರೆ.

ADVERTISEMENT

ವಿವಿಧ ಅಧಿಕಾರಿಗಳು ಮತ್ತು ಮೂಲಗಳಿಂದ ಸಂಬಂಧಿಸಿದ ಪ್ರಮುಖ ದಾಖಲೆಗಳು, ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್) ಗುವಾಹಟಿ, ಹೈದರಾಬಾದ್ ಮತ್ತು ಚಂಡೀಗಢ ಕೇಂದ್ರಗಳಿಂದ ತಾಂತ್ರಿಕ ಅಭಿಪ್ರಾಯಗಳನ್ನು ಪಡೆಯಲಾಗಿದೆ. ತನಿಖೆಯ ಸಂದರ್ಭದಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ ತಾಂತ್ರಿಕ ಪುರಾವೆಗಳನ್ನು ಕಲೆ ಹಾಕಲಾಗಿದೆ. ತನಿಖೆ ಪೂರ್ಣಗೊಂಡಿದ್ದು, ಮೇ 30, 2022 ರಂದು ಸಹಾಯಕ ಸರ್ಕಾರಿ ವಕೀಲರಮೂಲಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಹೇಳಿದರು.

ಸೇನೆಯ ಮೇಜರ್, ಇಬ್ಬರು ಸುಬೇದಾರ್, ಎಂಟು ಹವಾಲ್ದಾರರು, ನಾಲ್ವರು ನಾಯ್ಕ್‌, ಆರು ಲ್ಯಾನ್ಸ್ ನಾಯ್ಕ್‌ ಮತ್ತು ಒಂಬತ್ತು ಪ್ಯಾರಾಟ್ರೂಪರ್‌ಗಳು ಸೇರಿದಂತೆ 21 ಪ್ಯಾರಾ ವಿಶೇಷ ಪಡೆಯ ಕಾರ್ಯಾಚರಣೆ ತಂಡದ ಮೂವತ್ತು ಸದಸ್ಯರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.