ADVERTISEMENT

ಜಗನ್ ನಾಶ ಮಾಡುತ್ತಿರುವ ಆಂಧ್ರವನ್ನು ಉಳಿಸಲು ಕೈಜೋಡಿಸಿದ್ದೇವೆ: ಪವನ್–ನಾಯ್ಡು

ಪಿಟಿಐ
Published 29 ಫೆಬ್ರುವರಿ 2024, 5:36 IST
Last Updated 29 ಫೆಬ್ರುವರಿ 2024, 5:36 IST
<div class="paragraphs"><p>ಚಂದ್ರಬಾಬು ನಾಯ್ಡು ಮತ್ತು&nbsp;ಪವನ್ ಕಲ್ಯಾಣ್</p></div>

ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್

   

ಹೈದರಾಬಾದ್: ನಾವಿಬ್ಬರೂ ರಾಜಕೀಯವಾಗಿ ಕೈ ಜೋಡಿಸಿರುವುದು ವೈಯಕ್ತಿಕ ಲಾಭ ಮತ್ತು ಅಧಿಕಾರಕ್ಕಾಗಿ ಅಲ್ಲ. ರಾಜ್ಯದ 5 ಕೋಟಿ ಜನರ ಭವಿಷ್ಯಕ್ಕಾಗಿ ಎಂದು ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ(ಟಿಡಿಪಿ) ವರಿಷ್ಠ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ.

ತಡೆಪಲ್ಲಿಗುಂಡಂನಲ್ಲಿ ‘ತೆಲುಗು ಜನ ವಿಜಯ ಕೇತನಂ ಜೆಂಡಾ’ಎಂಬ ಸಾರ್ವಜನಿಕ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ ಟಿಡಿಪಿ ಮತ್ತು ಜನಸೇನಾ ಪಕ್ಷಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.

ADVERTISEMENT

'ಜಗನ್‌ನಿಂದ ನಾಶವಾಗುತ್ತಿರುವ ರಾಜ್ಯವನ್ನು ಉಳಿಸಲು ನಾವು ಕೈಜೋಡಿಸಿದ್ದೇವೆ. ಪ್ರಜಾಪ್ರಭುತ್ವದ ಹತ್ಯೆ ತಡೆಯಲು ಮತ್ತು ರೈತರು, ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಾವು ಜಂಟಿಯಾಗಿ ಯುದ್ಧಕ್ಕೆ ಇಳಿದಿದ್ದೇವೆ. ಬಡವರನ್ನು ರಕ್ಷಿಸಲು ಒಟ್ಟಿಗೆ ಹಜ್ಜೆ ಇಡುತ್ತಿದ್ದೇವೆ. ನಮ್ಮ ಮೈತ್ರಿಯು ರಾಜ್ಯವನ್ನು ವೈಎಸ್‌ಆರ್‌ಸಿಪಿ ಮುಕ್ತವಾಗಿಸಲು ಮತ್ತು ತೆಲುಗು ಜನರ ಆತ್ಮಗೌರವ ಕಾಪಾಡಲು ಮಾಡಿಕೊಂಡಿರುವುದಾಗಿದೆ. ತನ್ನ ಅಹಂಕಾರದಿಂದ ಒಬ್ಬ ವ್ಯಕ್ತಿ ರಾಜ್ಯಕ್ಕೆ ಮಾಡಿರುವ ಹಾನಿಯನ್ನು ಒಬ್ಬ ಹಿರಿಯ ನಾಯಕನಾಗಿ ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಇದೇವೇಳೆ, ಅನ್ಯಾಯವನ್ನು ಪ್ರಶ್ನಿಸುವ ಗುಣ ಹೊಂದಿರುವ ಪವನ್ ಕಲ್ಯಾಣ್ ಸಹ ಸುಮ್ಮನೆ ಕೂರಲಾರರು’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬಳಿಕ ಭಿನ್ನಮತ ಭುಗಿಲೆದ್ದಿದೆಯಾದರೂ ಉಭಯ ಪಕ್ಷಗಳ ನಾಯಕರು ಸರಣಿ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಯೋಜನೆಯಲ್ಲಿದ್ದಾರೆ.

‘ರಾಜ್ಯವನ್ನು ಉಳಿಸಲು ನಾವು ವೈಎಸ್‌ಆರ್‌ಸಿಪಿಯ ಡಕಾಯಿತರ ವಿರುದ್ಧ ಹೋರಾಡುತ್ತಿದ್ದೇವೆ. ಮೊದಲ ಬಾರಿಗೆ ನಾವು ಜಂಟಿ ಸಭೆ ನಡೆಸುತ್ತಿದ್ದೇವೆ. ಇದು ರಾಜ್ಯದ ಭವಿಷ್ಯವನ್ನು ಬದಲಾಯಿಸಲಿದೆ. ತಮ್ಮ ಅಹಂಕಾರದಿಂದ ರಾಜ್ಯಕ್ಕೆ ಹಾನಿ ಮಾಡಿದವರನ್ನು ಅಧಿಕಾರದಿಂದ ಕೆಳಗಿಳಿಸಲು ಜನ ಸಜ್ಜಾಗಿದ್ದಾರೆ’ ಎಂದು ನಾಯ್ಡು ಹೇಳಿದರು.

‘2024ರಲ್ಲಿ ರಾಜ್ಯದ ಸ್ಥಿತಿಯನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹೊಸ ಭವಿಷ್ಯಕ್ಕೆ ಅಡಿ ಇಡಬೇಕು. 2014ರಲ್ಲಿ ರಾಜ್ಯ ಉಳಿಸಲು ಸ್ವಯಂಪ್ರೇರಿತವಾಗಿ ಪವನ್, ಟಿಡಿಪಿ ಬೆಂಬಲಿಸಿದ್ದರು. ಈ ಹಿಂದೆ ಅಧಿಕಾರವನ್ನು ನಾವು ಜವಾಬ್ದಾರಿಯಾಗಿ ತೆಗೆದುಕೊಂಡಿದ್ದೆವು. ರಾಜ್ಯಕ್ಕಾಗಿ ನಮ್ಮ ತಲೆ ಉಪಯೋಗಿಸಿದ್ದೆವು’ ಎಂದಿದ್ದಾರೆ.

ಮಹಿಳೆಯರು, ರೈತರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ವೈಎಸ್‌ಆರ್‌ಸಿಪಿಯಿಂದ ಅನ್ಯಾಯವಾಗಿದೆ. ಹಿರಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು 53 ದಿನ ಜೈಲಿನಲ್ಲಿಟ್ಟಾಗ ನನಗೆ ಅತೀವ ನೋವುಂಟಾಯಿತು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಜಗನ್ ಅಧಿಕಾರದಿಂದ ಕೆಳಗಿಳಿಯುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಒಳ್ಳೆಯ ನಟನಾ ಕೌಶಲ್ಯ ಇದ್ದುಕೊಂಡು ಬಹಳಷ್ಟು ಹಣ ಮಾಡುವ ಅವಕಾಶವಿದ್ದರೂ ಜಗನ್ ನಾಶ ಮಾಡುತ್ತಿರುವ ಆಂಧ್ರ ಪ್ರದೇಶವನ್ನು ಉಳಿಸಲು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.