ನಜೀಬ್ ಅಹಮದ್
ಚಿತ್ರಕೃಪೆ: ಎಕ್ಸ್
ನವದೆಹಲಿ: ‘ನನ್ನ ಮಗನಿಗಾಗಿ ನನ್ನ ಕೊನೆಯ ಉಸಿರು ಇರುವ ತನಕ ಹೋರಾಟ ನಡೆಸುತ್ತೇನೆ. ನ್ಯಾಯಕ್ಕಾಗಿ ಈ ದೇಶದ ಎಲ್ಲ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಸಿದ್ಧನಿದ್ದೇನೆ. ಸುಪ್ರೀಂಕೋರ್ಟ್‌ಗೆ ಹೋಗಬೇಕಾಗಿ ಬಂದರೂ ಹೋಗುತ್ತೇನೆ’ ಎಂದು ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹಮದ್ ಅವರ ತಾಯಿ ಫಾತಿಮಾ ನಫೀಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಮಗ್ರ ತನಿಖೆಯ ಬಳಿಕವೂ ಯಾವುದೇ ಸಾಕ್ಷ್ಯ ಸಿಗದ ಕಾರಣ ನಜೀಬ್ ಅಹಮದ್ ನಾಪತ್ತೆ ಪ್ರಕರಣವನ್ನು ಮುಕ್ತಾಯಗೊಳಿಸಲು ದೆಹಲಿ ಕೋರ್ಟ್ ಸೋಮವಾರ ಸಿಬಿಐಗೆ ಅನುಮತಿ ನೀಡಿತ್ತು.
‘ನನ್ನ ಮಗನ ನಾಪತ್ತೆ ಪ್ರಕರಣದ ಕುರಿತು 9 ವರ್ಷಗಳಿಂದ ತನಿಖೆ ನಡೆಯುತ್ತಿದೆ. ತನಿಖೆ ಆರಂಭಗೊಂಡ ಮೊದಲ ದಿನದಿಂದಲೇ ದೆಹಲಿ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಇದೀಗ ದೆಹಲಿ ಕೋರ್ಟ್ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಸೂಚಿಸಿದೆ. ನನ್ನ ಹೋರಾಟವು ಕೇವಲ ನನ್ನ ಮಗನಿಗಾಗಿ ಮಾತ್ರವಲ್ಲ. ತಮ್ಮ ಮಕ್ಕಳಿಗಾಗಿ, ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿ ತಾಯಿಯ ಪರವಾಗಿ ನಾನು ಹೋರಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ಎಬಿವಿಪಿ’ಯಲ್ಲಿ ಗುರುತಿಸಿಕೊಂಡಿದ್ದ ಕೆಲವು ವಿದ್ಯಾರ್ಥಿಗಳು ನಜೀಬ್ ಮೇಲೆ ಹಲ್ಲೆ ನಡೆಸಿದ್ದರು. ಆ ನಂತರ ಆತ ವಿದ್ಯಾರ್ಥಿನಿಲಯದಿಂದ ನಾಪತ್ತೆಯಾಗಿದ್ದ. ಸಿಬಿಐ ಆಗಲಿ ದೆಹಲಿ ಪೊಲೀಸರಾಗಲಿ ಇದುವರೆಗೆ ಎಬಿವಿಪಿಯ ಯಾರನ್ನೂ ಬಂಧಿಸಿಲ್ಲ, ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ದೇಶದ ಅತಿ ದೊಡ್ಡ ತನಿಖಾ ಸಂಸ್ಥೆಯಾದ ಸಿಬಿಐಗಾಗಲಿ, ದೇಶದ ಇಡೀ ನ್ಯಾಯಾಂಗ ವ್ಯವಸ್ಥೆಗಾಗಲಿ ಒಂಬತ್ತು ವರ್ಷಗಳಲ್ಲಿ ನನ್ನ ಮಗ ಎಲ್ಲಿದ್ದಾನೆ ಎಂದು ಹೇಳಲು ಸಾಧ್ಯವಾಗಿಲ್ಲ’ ಎಂದು ನಫೀಸಾ ಬೇಸರ ವ್ಯಕ್ತಪಡಿಸಿದ್ದಾರೆ.
ನಜೀಬ್ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಿಂದ 2016ರ ಅಕ್ಟೋಬರ್ 15ರಿಂದ ನಾಪತ್ತೆಯಾಗಿದ್ದರು. ತಾಯಿಯ ದೂರಿನಂತೆ ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. 2018ರಲ್ಲಿ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
‘ವ್ಯವಸ್ಥೆ ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿದಾಗಲೆಲ್ಲ ಜೆಎನ್‌ಯು, ಜಾಮಿಯಾ, ಎಎಂಯು ಸೇರಿದಂತೆ ಇಡೀ ದೇಶದ ವಿದ್ಯಾರ್ಥಿಗಳು ನನ್ನ ಜತೆಗೆ ನಿಂತರು. ನನ್ನ ಮಗನಿಗಾಗಿ ರಸ್ತೆಗಿಳಿದು ಧ್ವನಿ ಎತ್ತಿದರು. ಇದು ನನ್ನ ಹೋರಾಟಕ್ಕೆ ಬೆಂಬಲ, ಭರವಸೆ, ಶಕ್ತಿ ತಂಬಿದೆ’ ಎಂದು ಅವರು ಹೇಳಿದ್ದಾರೆ.
‘ಮಗನ ಪತ್ತೆಗಾಗಿ 2016ರಿಂದ ಹೋರಾಡುತ್ತಿರುವ ನಜೀಬ್ ತಾಯಿಯ ಸಂಕಷ್ಟ ಅರ್ಥವಾಗುತ್ತದೆ. ಹಾಗಾಗಿ ಭವಿಷ್ಯದಲ್ಲಿ ಯಾವುದೇ ಸುಳಿವು ಸಿಕ್ಕರೂ ಈ ಪ್ರಕರಣವನ್ನು ಮತ್ತೆ ತೆರೆಯಲು ಸಿಬಿಐಗೆ ಅವಕಾಶ ನೀಡಿದ್ದೇವೆ’ ಎಂದು ದೆಹಲಿ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.