ADVERTISEMENT

ಪ್ರಕೃತಿ–ಸಂಸ್ಕೃತಿ ಮಿಲನವಾಗದೆ ವಿಕೋಪ ತಡೆಯಲಾಗದು: ಮೋದಿ

 'ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌ ಅವಾರ್ಡ್’ ಪ್ರಶಸ್ತಿ ಸ್ವೀಕರಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 17:47 IST
Last Updated 3 ಅಕ್ಟೋಬರ್ 2018, 17:47 IST
   

ನವದೆಹಲಿ: ಹವಾಮಾನ ಮತ್ತು ಪ್ರಕೃತಿ ವಿಕೋಪಗಳು ಸಂಸ್ಕೃತಿಯೊಂದಿಗೆ ನಂಟು ಹೊಂದಿವೆ. ಹಾಗಾಗಿ, ಹವಾಮಾನವು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗದಿದ್ದರೆ ಪ್ರಕೃತಿ ವಿಕೋಪಗಳನ್ನು ತಡೆಯುವುದು ಕಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರತಿಷ್ಠಿತ ‘ಚಾಂಪಿಯನ್ಸ್‌ ಆಫ್‌ ಅರ್ಥ್‌’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವಸಂಸ್ಥೆಯ ಮಹಾಪ‍್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಪ್ರಶಸ್ತಿ ಪ್ರದಾನ ಮಾಡಿದರು.

‘ಚಾಂಪಿಯನ್ಸ್‌ ಆಫ್‌ ಅರ್ಥ್‌’ ಪರಿಸರ ಕ್ಷೇತ್ರದಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ. ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟ ರಚನೆ ಮತ್ತು ಪರಿಸರ ರಕ್ಷಣೆಗಾಗಿ ಸಹಕಾರದ ಹೊಸ ಕ್ಷೇತ್ರಗಳ ಪ್ರವರ್ತನೆಗಾಗಿ ಈ ಬಾರಿ ಪ್ರಧಾನಿ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಅವರಿಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಗಿದೆ.

ADVERTISEMENT

ಸ್ವಚ್ಛ ಮತ್ತು ಹಸಿರು ಪರಿಸರ ತಮ್ಮ ಸರ್ಕಾರದ ನೀತಿಯ ಅಡಿಪಾಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕೃಷಿ ಮತ್ತು ಕೈಗಾರಿಕಾ ನೀತಿಯಿಂದ ಮನೆ ಮತ್ತು ಶೌಚಾಲಯ ನಿರ್ಮಾಣದವರೆಗೆ ಎಲ್ಲದರಲ್ಲಿಯೂ ಸ್ವಚ್ಛ ಪರಿಸರ ಇರಬೇಕು ಎಂಬುದೇ ತಮ್ಮ ಸರ್ಕಾರದ ಚಾಲಕ ಶಕ್ತಿ ಎಂದು ಅವರು ವಿವರಿಸಿದರು.

ಪರಿಸರದ ಬಗ್ಗೆ ಭಾರತದ ಬದ್ಧತೆ ಈಗ ಇನ್ನಷ್ಟು ಹೆಚ್ಚಾಗಿದೆ. ಪರಿಸರವನ್ನು ಗೌರವಿಸುವುದು ಭಾರತೀಯ ಸಮಾಜದ ಭಾಗವೇ ಆಗಿದೆ ಎಂಬುದನ್ನು ಹಲವು ಶ್ಲೋಕಗಳನ್ನು ಉಲ್ಲೇಖಿಸುವ ಮೂಲಕ ಅವರು ಮನದಟ್ಟು ಮಾಡಿದರು. ಇದಕ್ಕೆ ಅನುಗುಣವಾಗಿ ಜನರ ವರ್ತನೆಯನ್ನು ಬದಲಾಯಿಸುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದೂ ಅವರು ಹೇಳಿದರು. ಸ್ವಚ್ಛ ಭಾರತ ಅಭಿಯಾನವನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು.

ತಮ್ಮ ಜೀವಕ್ಕಿಂತ ಮರಗಳನ್ನು ಹೆಚ್ಚು ಗೌರವಿಸುವ ಆದಿವಾಸಿಗಳು, ತಮ್ಮ ಜೀವನೋಪಾಯಕ್ಕೆ ಬೇಕಾದಷ್ಟು ಮೀನು ಮಾತ್ರ ಹಿಡಿಯುವ ಮೀನುಗಾರರು ಮತ್ತು ಋತುಗಳ ಜತೆಗೆ ಜೀವನವನ್ನೇ ಹೆಣೆದುಕೊಂಡಿರುವ ರೈತರಿಗೆ ಸಿಕ್ಕ ಮನ್ನಣೆ ಈ ಪ್ರಶಸ್ತಿ ಎಂದು ಮೋದಿ ಹೇಳಿದರು.

ಅಷ್ಟೇ ಅಲ್ಲ, ಮರಗಳನ್ನು ದೇವರೆಂದು ಪೂಜಿಸುವ ಮಹಿಳೆಯರಿಗೆ ಸಿಕ್ಕ ಗೌರವವೂ ಹೌದು. ಮರುಬಳಕೆ ಮತ್ತು ಪುನರ್‌ಬಳಕೆ ಅವರ ಜೀವನದ ಭಾಗವೇ ಆಗಿಬಿಟ್ಟಿದೆ. ಪರಿಸರವೂ ಒಂದು ಜೀವಂತ ವ್ಯವಸ್ಥೆ ಎಂದು ಭಾರತೀಯರು ನಂಬಿದ್ದಾರೆ ಎಂದರು.

ತಮ್ಮ ಸ್ಮಾರ್ಟ್‌ ಸಿಟಿ ಯೋಜನೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನವೇ ಅಡಿಪಾಯವಾಗಿದೆ. ಹಾಗೆಯೇ ‘ಪ್ರತಿ ಹನಿಗೆ ಹೆಚ್ಚು ಫಸಲು’, ಮಣ್ಣು ಆರೋಗ್ಯ ಕಾರ್ಡ್‌ ಮತ್ತು ಸಾವಯವ ಬೇಸಾಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹವಾಮಾನ ಬದಲಾವಣೆಯ ಉದ್ದೇಶದಿಂದ 2016ರಲ್ಲಿ ಸಹಿ ಮಾಡಲಾದ ಪ್ಯಾರಿಸ್‌ ಒಪ್ಪಂದ ಸಂದರ್ಭದಲ್ಲಿ ತಾವು ‘ಹವಾಮಾನ ನ್ಯಾಯ’ದ ಬಗ್ಗೆ ಮಾತನಾಡಿದ್ದನ್ನು ಮೋದಿ ನೆನಪಿಸಿಕೊಂಡರು. ಇಡೀ ಜಗತ್ತು ಈ ಒಪ್ಪಂದಕ್ಕೆ ಬದ್ಧವಾಗಿದ್ದರೂ ತಳಮಟ್ಟದಲ್ಲಿ ಅದರ ಅನುಷ್ಠಾನಕ್ಕೆ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

**

ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ನಾಯಕನನ್ನು ಮೋದಿಯವರಲ್ಲಿ ಕಂಡಿದ್ದೇವೆ. ಅವರಿಗೆ ಸಮಸ್ಯೆ ಗೊತ್ತಿಗೆ ಮತ್ತು ಅವರ ಅದನ್ನು ಪರಿಹರಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ
- ಅಂಟೊನಿಯೊ ಗುಟೆರೆಸ್‌, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ

ಮೋದಿ ಹೇಳಿದ್ದು...

* ಇಂಗಾಲದ ಹೊರಸೂಸುವಿಕೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಶೇ 20ರಿಂದ 25ರಷ್ಟು ಕಡಿಮೆ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ

* 2030ರ ಹೊತ್ತಿಗೆ ಶೇ 30ರಿಂದ 35ರಷ್ಟು ಕಡಿಮೆ ಮಾಡಲಾಗುವುದು

* ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ಬಳಕೆಯನ್ನು 2022ರ ಹೊತ್ತಿಗೆ ಸಂಪೂರ್ಣ ನಿಲ್ಲಿಸಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.