ADVERTISEMENT

ಪ್ರಧಾನಿ ಮೋದಿಯಿಂದ ದೇಶದಲ್ಲಿ ಗೊಂದಲ ಸೃಷ್ಟಿ: ರಾಹುಲ್‌ ಗಾಂಧಿ

ಪಿಟಿಐ
Published 6 ಫೆಬ್ರುವರಿ 2020, 18:30 IST
Last Updated 6 ಫೆಬ್ರುವರಿ 2020, 18:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಪ್ರಮುಖ ವಿಷಯವಾಗಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡದೇ ಜವಾಹರಲಾಲ್‌ ನೆಹರು ಅವರಿಂದ ಹಿಡಿದು ಪಾಕಿಸ್ತಾನದ ಇತರ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದುಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್‌ ಗಾಂಧಿ ಹೇಳಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯಕ್ಕೆ ನಡೆದ ಚರ್ಚೆಯಲ್ಲಿ ಪ್ರಧಾನಿ ಉತ್ತರಿಸಿದ ನಂತರ ರಾಹುಲ್‌ ಅವರು, ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಸುದೀರ್ಘ ಭಾಷಣಗಳನ್ನು ನೀಡಿದ್ದಾರೆ. ಆದರೆ, ಉದ್ಯೋಗ ಒದಗಿಸುವ ಬಗ್ಗೆ ಯುವಕರಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿರುಗೇಟು ನಿಡಿದರು.

‘ಶಿಕ್ಷಣ ಪಡೆದ ನಂತರ ಉದ್ಯೋಗ ದೊರೆಯಬೇಕು ಎಂದು ದೇಶದ ಎಲ್ಲ ಯುವಕರು ಬಯಸುತ್ತಾರೆ. ಆದರೆ, ಒಂದೂವರೆ ಗಂಟೆಗಳ ಅವಧಿಯ ಭಾಷಣ ನೀಡಿದ್ದೀರಿ. ಯುವಕರಿಗೆ ಉದ್ಯೋಗ ಒದಗಿಸುವ ಬಗ್ಗೆ ನಿಮ್ಮ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬುದನ್ನು ಹೇಳಲು ಎರಡು ನಿಮಿಷ ನಿಮಗೆ ಸಮಯವಿಲ್ಲವೇ? ಈ ಬಗ್ಗೆ ಪದೇ ಪದೇ ಕೇಳಿದರೂ ನೀವು ಮೌನ ವಹಿಸಿದ್ದೀರಿ’ ಎಂದು ರಾಹುಲ್‌ ಆಪಾದಿಸಿದರು.

ADVERTISEMENT

‘ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವಂತೆ ಮೋದಿ ಅವರ ನಡೆ ಕಂಡುಬರುತ್ತಿದೆ. ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಐದೂವರೆ ವರ್ಷ ಕಳೆದರೂ ಏನೂ ಸಾಧನೆ ಆಗಿಲ್ಲ. ಅಲ್ಲದೇ, ಕಳೆದ ವರ್ಷ ಒಂದು ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.