ADVERTISEMENT

‘ಪಿಎಂ ಗತಿಶಕ್ತಿ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 13 ಅಕ್ಟೋಬರ್ 2021, 18:24 IST
Last Updated 13 ಅಕ್ಟೋಬರ್ 2021, 18:24 IST
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ   

ನವದೆಹಲಿ: ಬಹು ಮಾದರಿ ಸಂಪರ್ಕ ಏರ್ಪಡಿಸುವ ₹100 ಲಕ್ಷ ಕೋಟಿ ಮೌಲ್ಯದ ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ಕೊಟ್ಟರು. ಸಾಗಣೆವೆಚ್ಚ ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.

ಈ ಯೋಜನೆಯು ಎಲ್ಲ ಸಂಬಂಧಿತ ಇಲಾಖೆಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಮೂಲಕ ಯೋಜನೆಗಳಿಗೆ ಹೆಚ್ಚಿನ ಶಕ್ತಿ ಮತ್ತು ವೇಗವನ್ನು ನೀಡುವ ಗುರಿ ಹೊಂದಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಮೂಲಸೌಕರ್ಯ ಯೋಜನೆಗಳನ್ನು ಒಂದೇ ದೃಷ್ಟಿಕೋನದಿಂದ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗುವುದು ಎಂದು ಪ್ರಧಾನಿ ಹೇಳಿದರು.

‘ಈ ಹಿಂದೆ ತೆರಿಗೆದಾರರ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸುವಾಗ ಇಲಾಖೆಗಳ ನಡುವೆ ಯಾವುದೇ ಸಮನ್ವಯ ಇರಲಿಲ್ಲ. ಗುಣಮಟ್ಟದ ಮೂಲಸೌಕರ್ಯವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಸರ್ಕಾರ ಈಗ ಅದನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ’ ಎಂದು ಅವರು ಹೇಳಿದರು.

ADVERTISEMENT

ರಸ್ತೆ, ರೈಲ್ವೆ, ವಿಮಾನಯಾನ, ಕೃಷಿ ಹೀಗೆ ಸರ್ಕಾರದ ವಿವಿಧ ಕ್ಷೇತ್ರಗಳ ಯೋಜನೆಗಳನ್ನು ಸಂಘಟಿತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಗತಿ ಶಕ್ತಿ ಯೋಜನೆಯು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುತ್ತದೆ ಎಂದರು. ಗತಿಶಕ್ತಿ ರಾಷ್ಟ್ರೀಯ ಯೋಜನೆ ಸರಿಯಾದ ಮಾಹಿತಿ ಮತ್ತು ನಿರ್ದೇಶನವನ್ನು ನೀಡುತ್ತದೆ. ಇದರಿಂದನಿಗದಿತ ಸಮಯದ ಚೌಕಟ್ಟಿನೊಳಗೆ ಸರ್ಕಾರಿ ಯೋಜನೆಗಳು ಪೂರ್ಣಗೊಳ್ಳುತ್ತವೆ ಎಂದರು.

ಭಾರತದಲ್ಲಿ ಜಿಡಿಪಿಯ ಶೇ 13ರಷ್ಟು ವೆಚ್ಚವು ಸಾಗಣೆಗೆ ಹೋಗುತ್ತಿದೆ. ಈ ಯೋಜನೆಯು ಸಾಗಣೆ ವೆಚ್ಚದ ಜೊತೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯವನ್ನು ಕಡಿತಗೊಳಿಸುವ ಗುರಿ ಹೊಂದಿದೆ ಎಂದ ಅವರು, ಇದು ಹೂಡಿಕೆ ತಾಣವಾಗಲು ಭಾರತಕ್ಕೆ ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

‘ಹಿಂದೆಂದಿಗಿಂತ ವೇಗ’

ದೇಶದ 70 ವರ್ಷಗಳ ಇತಿಹಾಸದಲ್ಲಿ, ಈಗಿನ ಸರ್ಕಾರದ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ವೇಗ ಮತ್ತು ಪ್ರಮಾಣವನ್ನು ಎಂದೂ ನೋಡಿಲ್ಲ ಎಂದು ಪ್ರಧಾನಿ ಹೇಳಿದರು.ಮೊದಲ ಅಂತರರಾಜ್ಯ ನೈಸರ್ಗಿಕ ಅನಿಲ ಪೈಪ್‌ಲೈನ್ ಅನ್ನು 1987ರಲ್ಲಿ ಆರಂಭಿಸಲಾಯಿತು. ಅಂದಿನಿಂದ 2014ರವರೆಗೆ 15,000 ಕಿ.ಮೀ. ನೈಸರ್ಗಿಕ ಅನಿಲ ಪೈಪ್‌ಲೈನ್ ನಿರ್ಮಿಸಲಾಗಿದೆ. ಪ್ರಸ್ತುತ, 16,000 ಕಿ.ಮೀ.ಗಿಂತ ಹೆಚ್ಚು ಹೊಸ ಗ್ಯಾಸ್ ಪೈಪ್‌ಲೈನ್ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಉದಾಹರಣೆ ಕೊಟ್ಟರು.

‘27 ವರ್ಷಗಳಲ್ಲಿ ಏನು ಮಾಡಲಾಗಿದೆಯೋ, ನಾವು ಅದನ್ನು ಅರ್ಧಕ್ಕಿಂತ ಕಡಿಮೆ ಸಮಯದಲ್ಲಿ ಮಾಡುತ್ತಿದ್ದೇವೆ’ ಎಂದು ಹೇಳಿದರು.2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಐದು ವರ್ಷಗಳ ಮುನ್ನ, 1,900 ಕಿ.ಮೀ. ರೈಲು ಮಾರ್ಗವನ್ನು ದ್ವಿಪಥ ಮಾಡಲಾಗಿತ್ತು. ಕಳೆದ 7 ವರ್ಷಗಳಲ್ಲಿ 9,000 ಕಿ.ಮೀ. ರೈಲು ಮಾರ್ಗ ದ್ವಿಪಥವಾಗಿ ಪರಿವರ್ತನೆಯಾಗಿದೆ ಎಂದರು.

ಅದೇ ರೀತಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಐದು ವರ್ಷಗಳ ಮುನ್ನ 3,000 ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣ ಮಾಡಲಾಗಿತ್ತು. ಕಳೆದ 7 ವರ್ಷಗಳಲ್ಲಿ 24,000 ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣ ಮಾಡಲಾಗಿದೆ. 2015ರಲ್ಲಿ 250 ಕಿ.ಮೀ. ಇದ್ದ ಮೆಟ್ರೋ ರೈಲು ಜಾಲವು ಈಗ 700 ಕಿ.ಮೀ.ಗಳಿಗೆ ವಿಸ್ತರಿಸಲ್ಪಟ್ಟಿದ್ದು, ಇನ್ನೂ 1,000 ಕಿ.ಮೀ.ಗಳಷ್ಟು ಕೆಲಸ ನಡೆಯುತ್ತಿದೆ ಎಂದರು.

***

‘ಕೆಲಸ ಪ್ರಗತಿಯಲ್ಲಿದೆ’ ಎಂಬ ಫಲಕವು ನಂಬಿಕೆ ಕೊರತೆಯ ಸಂಕೇತ. ಕಾಲಮಿತಿಗಿಂತ ಮುಂಚೆ ಕಾಮಗಾರಿ ಪೂರ್ಣಗೊಳಿಸುವ ಯತ್ನ ನಡೆಯುತ್ತಿದೆ

-ನರೇಂದ್ರ ಮೋದಿ, ಪ್ರಧಾನಿ

***

ಗತಿಶಕ್ತಿಯು ಆಡಳಿತದಲ್ಲಿ ಮಾದರಿ ಬದಲಾವಣೆಯನ್ನು ಸೂಚಿಸುವ ಕೆಲವು ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದೆ

- ಕುಮಾರಮಂಗಳಂ ಬಿರ್ಲಾ,ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.