ADVERTISEMENT

ಪುಣೆ ಪೊಲೀಸರ ‘ವಾಂಟೆಡ್’ ಪಟ್ಟಿಯಲ್ಲಿ ನಕ್ಸಲರ ಹೆಸರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 17:55 IST
Last Updated 16 ನವೆಂಬರ್ 2018, 17:55 IST

ಮುಂಬೈ:ಪ್ರಮುಖ ನಕ್ಸಲ್‌ ನಾಯಕ ಮಿಲಿಂದ್ ತೆಲ್ತುಂಬ್ಡೆ ಸೇರಿದಂತೆಐವರು ನಕ್ಸಲ್‌ ಹೋರಾಟಗಾರರನ್ನು ಭೀಮಾ–ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ‘ಹುಡುಕಾಡುತ್ತಿರುವ ವ್ಯಕ್ತಿಗಳ ಪಟ್ಟಿಗೆ’ ಪುಣೆ ಪೊಲೀಸರು ಸೇರಿಸಿದ್ದಾರೆ.

ಕಾಮ್ರೇಡ್‌ ಪ್ರಕಾಶ್‌ ಅಲಿಯಾಸ್ ನವೀನ್‌ ಅಲಿಯಾಸ್‌ ರಿತುಪಮ್‌ ಗೋಸ್ವಾಮಿ, ಕಾಮ್ರೇಡ್‌ ಮಂಗ್ಲು, ಕಾಮ್ರೇಡ್‌ ದೀಪು ಮತ್ತು ಕಿಶನ್‌ ಅಲಿಯಾಸ್‌ ಪ್ರಶಾಂತ್‌ ಬೋಸ್‌ ಈ ಪಟ್ಟಿಯಲ್ಲಿದ್ದಾರೆ.

ಸಿಪಿಐ (ಮಾವೊವಾದಿ) ಗುಂಪಿನ ಈಶಾನ್ಯ ವಲಯದ ಕಾರ್ಯದರ್ಶಿಯಾಗಿರುವ ಪ್ರಶಾಂತ್‌ ಬೋಸ್‌ ಅವರು ಸಂಘಟನೆಯಲ್ಲಿ ಈ ಐವರ ಪೈಕಿ ಉನ್ನತ ಹುದ್ದೆಯಲ್ಲಿದ್ದಾರೆ. ಮಹಾರಾಷ್ಟ್ರದ ಮಾವೊವಾದಿ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿರುವ 50 ವರ್ಷದ ತೆಲ್ತುಂಬ್ಡೆ ದಶಕಗಳಿಂದ ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ ಭೂಗತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದು, ಹುಡುಕಿ ಕೊಟ್ಟವರಿಗೆ ₹50 ಲಕ್ಷ ಬಹುಮಾನ ಘೋಷಿಸಿದ್ದಾರೆ. ನಕ್ಸಲರ ಪ್ರಾಬಲ್ಯವಿರುವ ಗಡಿ ಪ್ರದೇಶ ಗಡಚಿರೋಲಿಯಲ್ಲಿ ಸಕ್ರಿಯರಾಗಿರುವ ಮಿಲಿಂದ್‌ ಮಹಾರಾಷ್ಟ್ರದ ವಿದರ್ಭ ಭಾಗದವರು.

ADVERTISEMENT

ಯಾರು ಈ ‘ಕಾಮ್ರೇಡ್‌ ಎಂ’?:ನಕ್ಸಲ್‌ ವಲಯಗಳಲ್ಲಿ ‘ಕಾಮ್ರೇಡ್‌ ಎಂ’ ಎಂದು ಗುರುತಿಸಿಕೊಂಡಿರುವ ಮಿಲಿಂದ್‌ ಅವರಿಗೆ ದೀಪಕ್‌, ಪ್ರವೀಣ್‌, ಅರುಣ್‌, ಸುಧೀರ್‌ ಮುಂತಾದ ಹೆಸರುಗಳೂ ಇವೆ. ಪೊಲೀಸರು ಇದೇ ಏಪ್ರಿಲ್‌ 22–23ರಂದು ಗಡಚಿರೋಲಿ ಅರಣ್ಯದಲ್ಲಿ ಮಿಲಿಂದ್‌ಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ 40ಕ್ಕೂ ಹೆಚ್ಚು ನಕ್ಸಲರು ಬಲಿಯಾಗಿದ್ದರು.ಮಿಲಿಂದ್‌ ಪತ್ನಿ ಏಂಜೆಲಾ ಅವರನ್ನು 2011ರಲ್ಲಿ ಪೊಲೀಸರು ಬಂಧಿಸಿದ್ದರು.

ನಗರ ಪ್ರದೇಶಗಳಲ್ಲಿ ಮಾವೊವಾದಿಗಳ ಜಾಲ ವಿಸ್ತರಿಸುವ ಜತೆಗೆ ದಲಿತ ಸಮುದಾಯದವರನ್ನು ಸಂಘಟನೆಗೆ ಸೆಳೆಯುವ ಮಹತ್ವದ ಪಾತ್ರವನ್ನು ಮಿಲಿಂದ್‌ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ದೋಷಾರೋಪಪಟ್ಟಿಯಲ್ಲಿ ಹೇಳಿದ್ದಾರೆ.

ಡಾ. ಅಂಬೇಡ್ಕರ್ ಸಂಬಂಧಿ: ಮಿಲಿಂದ್‌ ಅವರ ಸಹೋದರ ಆನಂದ್‌ ತೆಲ್ತುಂಬ್ಡೆ ಅವರು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ಸಹೋದರಿಯನ್ನು ಮದುವೆಯಾಗಿದ್ದಾರೆ. ಗೋವಾ ಆಡಳಿತ ನಿರ್ವಹಣೆ ಸಂಸ್ಥೆಯಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಆನಂದ್‌ ಅವರ ಮನೆಯಲ್ಲಿಯೂ ಪುಣೆಯ ಪೊಲೀಸರು ದಾಖಲೆಗಳಿಗಾಗಿ ಜಾಲಾಡಿದ್ದರು.

**

ಮೋದಿ ಹತ್ಯೆಗೆ ಸಂಚು: 10 ನಕ್ಸಲರ ವಿರುದ್ಧ ಆರೋಪಪಟ್ಟಿ

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಕೆಲವು ಮಾವೊವಾದಿ ನಾಯಕರು ಅದಕ್ಕಾಗಿ ಶಸ್ತ್ರಾಸ್ತ್ರ ಸಂಗ್ರಹಿಸಲು ಮುಂದಾಗಿದ್ದರು ಎಂದು ಪುಣೆಯ ಪೊಲೀಸರು ಹೇಳಿದ್ದಾರೆ.

ಭೀಮಾ–ಕೋರೆಂಗಾವ್‌ ಹಿಂಸಾಚಾರ ಪ್ರಕರಣದ ಸಂಬಂಧ ಪುಣೆಯ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದ ಐದು ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಸಾಮಾಜಿಕ ಹೋರಾಟಗಾರರಾದ ಸುರೇಂದ್ರ ಗಡಲಿಂಗ್‌, ಮಹೇಶ್‌ ರಾವತ್‌, ಶೋಮಾ ಸೇನ್‌, ರೋನಾ ವಿಲ್ಸನ್‌ ಮತ್ತು ಸುಧೀರ್‌ ಧವಳೆ ಸೇರಿದಂತೆ ಹತ್ತು ಜನರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಪುಣೆಯ ಪೊಲೀಸರು ಇವರನ್ನು ಜೂನ್‌ 6ರಂದು ಬಂಧಿಸಿದ್ದರು.

ಭೂಗತ ನಕ್ಸಲ್ ಹೋರಾಟಗಾರರಾದ ಮಿಲಿಂದ್‌ ತೆಲ್ತುಂಬ್ಡೆ, ಪ್ರಕಾಶ್‌ ಅಲಿಯಾಸ್ ರಿತುಪಮ್‌ ಗೋಸ್ವಾಮಿ, ಮಂಗ್ಲು, ದೀಪು ಮತ್ತು ಕಿಶನ್‌ ಅಲಿಯಾಸ್‌ ಪ್ರಶಾಂತ್‌ ಬೋಸ್‌ ಸಹ ಈ ಪಟ್ಟಿಯಲ್ಲಿದ್ದಾರೆ. ಮಾವೊವಾದಿ ನಾಯಕರಾದ ರೋನಾ ವಿಲ್ಸನ್‌ ಮತ್ತು ಕಿಶನ್‌ ದಾ ಅವರು ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದರು. ಶಸ್ತ್ರಾಸ್ತ್ರ ಸಂಗ್ರಹಕ್ಕೆ ಮುಂದಾಗಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.