ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಸೂಚಿಸಿರುವ ಪಠ್ಯಕ್ರಮವನ್ನು ಮಾತ್ರ ಅನುಸರಿಸುವಂತೆ ದೇಶದಾದ್ಯಂತ ಶಾಲೆಗಳಿಗೆ ಸೂಚಿಸಿದ ವರ್ಷದ ಬಳಿಕ, ಇದರ ಅನುಷ್ಠಾನ ಸರಿಯಾಗಿ ಆಗುತ್ತಿದೆ ಎನ್ನುವುದನ್ನು ಖಚಿತಪಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಎಲ್ಲ ಶಾಲೆಗಳಿಗೆ ಮತ್ತೊಮ್ಮೆ ಸೂಚಿಸಿದೆ.
ಇದನ್ನು ಅನುಷ್ಠಾನಗೊಳಿಸುವಲ್ಲಿ ಶಾಲೆಗಳು ವಿಫಲವಾದರೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) 2009ರ ಉಲ್ಲಂಘನೆಯಾಗಲಿದೆ ಎಂದೂ ಅದು ಎಚ್ಚರಿಸಿದೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿಯೂ ಎನ್‌ಸಿಪಿಸಿಆರ್, ಮಂಡಳಿ ಶಿಫಾರಸು ಮಾಡಿದ ಪಠ್ಯಕ್ರಮದಿಂದ ಮಾತ್ರ ಕಲಿಸಲು ಶಾಲೆಗಳಿಗೆ ಸೂಚಿಸುವಂತೆ ಇದೇ ರೀತಿಯ ಸಲಹೆ ನೀಡಿತ್ತು. ಖಾಸಗಿ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳನ್ನು ಬಳಸುವಂತೆ ಕೆಲ ಶಾಲೆಗಳು ಪದೇಪದೇ ಶಿಫಾರಸು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿರುವ ಎನ್‌ಸಿಪಿಸಿಆರ್, ಈ ಸಂಬಂಧ ಸೂಚನೆಯ ಪತ್ರವನ್ನು ಇದೇ 9ರಂದು ಎಲ್ಲ ಶಾಲೆಗಳಿಗೆ ರವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.