ADVERTISEMENT

ಉಪ ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ಧನಕರ್‌ ನಾಮಪತ್ರ ಸಲ್ಲಿಕೆ

ಪಿಟಿಐ
Published 18 ಜುಲೈ 2022, 12:36 IST
Last Updated 18 ಜುಲೈ 2022, 12:36 IST
ಉಪ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರು ಸೋಮವಾರ ನವದೆಹಲಿಯ ಸಂಸತ್ ಭವನದಲ್ಲಿ  ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್‌ ಶಾ, ನಿತಿನ್‌ ಗಡ್ಕರಿ ಇದ್ದರು –ಪಿಟಿಐ ಚಿತ್ರ
ಉಪ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರು ಸೋಮವಾರ ನವದೆಹಲಿಯ ಸಂಸತ್ ಭವನದಲ್ಲಿ  ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್‌ ಶಾ, ನಿತಿನ್‌ ಗಡ್ಕರಿ ಇದ್ದರು –ಪಿಟಿಐ ಚಿತ್ರ   

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್‌ ಧನಕರ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ನಿತಿನ್‌ ಗಡ್ಕರಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಜೆಡಿಯು ಮುಖ್ಯಸ್ಥ ಲಲನ್‌ ಸಿಂಗ್‌, ಬಿಜೆಡಿ ನಾಯಕ ಪಿನಾಕಿ ಮಿಶ್ರಾ ಹಾಜರಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಧನಕರ್‌ ಅವರು, ‘ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ನನ್ನಂಥವರಿಗೆ ಈ ರೀತಿಯ ‘ಐತಿಹಾಸಿಕ’ ಅವಕಾಶ ಸಿಗುತ್ತದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ’ ಎಂದರು.

ADVERTISEMENT

‘ನಾನು ಯಾವಾಗಲೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೆಚ್ಚಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಉಪ ರಾಷ್ಟ್ರಪತಿ ಚುನಾವಣೆ ಆಗಸ್ಟ್ 6ರಂದು ನಡೆಯಲಿದ್ದು, ವಿರೋಧ ಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಕರ್ನಾಟಕದ ಮಾರ್ಗರೇಟ್ ಆಳ್ವಅವರನ್ನುಆರಿಸಿವೆ.

ಲೋಕಸಭಾ ಮತ್ತು ರಾಜ್ಯಸಭೆಯ ಸದಸ್ಯರು (ಎಲೆಕ್ಟೋರಲ್‌ ಕಾಲೇಜ್‌) ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವರು. ಒಟ್ಟಾರೆ 780 ಸದಸ್ಯರ ಪೈಕಿ ಬಿಜೆಪಿ ಬಳಿಯೇ 394 ಸದಸ್ಯರ ಬಲವಿದೆ. ಚುನಾವಣೆಯಲ್ಲಿ ಗೆಲ್ಲಲು 391 ಮತಗಳು ಸಾಕು.

ಜೆಡಿಯು, ಬಿಜೆಡಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಧನಕರ್‌ ಅವರಿಗೆ ಬೆಂಬಲ ಸೂಚಿಸಿವೆ. ಈ ಪಕ್ಷಗಳು ಕ್ರಮವಾಗಿ 21, 21 ಮತ್ತು 31 ಸಂಸದರನ್ನು ಹೊಂದಿವೆ. ಬಿಜೆಪಿಯ 394 ಮತಗಳೊಂದಿಗೆ ಈ ಪಕ್ಷಗಳ ಮತಗಳೂ ಸೇರಿದರೆ, ಧನಕರ್‌ ಅವರಿಗೆ 467 ಮತಗಳ ಬೆಂಬಲ ದೊರೆತಂತಾಗುತ್ತದೆ.

ಅಲ್ಲದೆ, ಐವರು ಸಂಸದರನ್ನು ಹೊಂದಿರುವ ಎಐಎಡಿಎಂಕೆ, ಇಬ್ಬರು ಸಂಸದರನ್ನು ಹೊಂದಿರುವ ಅಪ್ನಾ ದಳ ಹಾಗೂ ಈಶಾನ್ಯ ರಾಜ್ಯಗಳ ಕೆಲ ಪಕ್ಷಗಳು ಧನಕರ್‌ ಅವರನ್ನು ಬೆಂಬಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.