ನವದೆಹಲಿ (ಪಿಟಿಐ): ಎನ್‌ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳ ವಿಚಾರಣೆಗಾಗಿಯೇ ನಿಯೋಜಿತ ಕೋರ್ಟ್ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಒತ್ತಿ ಹೇಳಿದೆ.
ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳು ಗಂಭೀರವಾಗಿದ್ದು, ದೇಶದಾದ್ಯಂತ ವ್ಯಾಪ್ತಿ ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೋಟೀಶ್ವರ ಸಿಂಗ್ ಅವರಿದ್ದ ಪೀಠ ಹೇಳಿದೆ.
ನಕ್ಸಲರ ಪರ ಅನುಕಂಪವುಳ್ಳ ಗಡಚಿರೋಲಿಯ ನಿವಾಸಿ ಕೈಲಾಶ್ ರಾಮ್‌ಚಂದಾನಿ ಅವರಿಗೆ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ನಿಯೋಜಿತ ಕೋರ್ಟ್‌ನ ಅವಶ್ಯಕತೆಯ ಬಗ್ಗೆ ಗಮನಹರಿಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಕುಮಾರ್ ಭಾಸ್ಕರ್ ಠಾಕ್ರೆ ಅವರಿಗೆ ನಾಲ್ಕು ವಾರ ಸಮಯ ನೀಡಿದ ಪೀಠ, ವಿಚಾರಣೆಯನ್ನು ಜುಲೈಗೆ ಮುಂದೂಡಿತು.
‘ಎನ್‌ಐಎ ತನಿಖೆಯಲ್ಲಿರುವ ಪ್ರಕರಣಗಳಿಗೆ ನೂರಾರು ಸಾಕ್ಷಿಗಳಿರುತ್ತವೆ. ಹಾಲಿ ಕೋರ್ಟ್‌ನಲ್ಲಿ ವಿಚಾರಣೆ ನಡೆದರೆ, ನ್ಯಾಯಮೂರ್ತಿಗಳು ಇತರೆ ಪ್ರಕರಣಗಳನ್ನು ಗಮನಿಸಬೇಕಾದ ಕಾರಣ ನಿಗದಿತ ವೇಗದಲ್ಲಿ ಎನ್ಐಎ ಪ್ರಕರಣಗಳ ವಿಚಾರಣೆ ಸಾಧ್ಯವಾಗದು’ ಎಂದು ಪೀಠ ಕಾರಣ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.