ADVERTISEMENT

ನೀಟ್‌–ಪಿಜಿ: ಅನಿಶ್ಚಿತ ದೂರವಾಗಿಸಬೇಕಿದೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 18:02 IST
Last Updated 5 ಜನವರಿ 2022, 18:02 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನೀಟ್‌– ಪಿಜಿ ಪ್ರವೇಶಾತಿಗೆ ಸಂಬಂಧಿಸಿದಂತೆ ಎದುರಾಗಿರುವ ಅನಿಶ್ಚಿತತೆಯನ್ನು ದೂರವಾಗಿಸಬೇಕಾದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ.

ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ನಿಗದಿಪಡಿಸಿರುವ ವಾರ್ಷಿಕ ಎಂಟು ಲಕ್ಷ ರೂಪಾಯಿ ಆದಾಯ ಮಿತಿಗೆ ಸಂಬಂಧಿಸಿ ಎದುರಾಗಿರುವ ಆಕ್ಷೇಪಗಳಿಂದ ಸ್ಥಗಿತಗೊಂಡಿರುವ ನೀಟ್‌ ಪಿಜಿ ಕೌನ್ಸೆಲಿಂಗ್‌ ಆರಂಭಿಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡಿತು. ಆಗ ಸುಪ್ರೀಂಕೋರ್ಟ್‌ ಮೇಲಿನಂತೆ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರ ಪೀಠದ ಮುಂದೆ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಈಗ ಕೌನ್ಸೆಲಿಂಗ್‌ ಸ್ಥಗಿತಗೊಂಡಿದೆ. ಈ ಕಠಿಣ ಸಂದರ್ಭದಲ್ಲಿ ನಮಗೆ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಹೀಗಿರುವಾಗ ಮೀಸಲಾತಿಗೆ ಸಂಬಂಧಿಸಿದಂತೆ ದೀರ್ಘ ವಾದ, ಪ್ರತಿವಾದಗಳು ಅಗತ್ಯವಿಲ್ಲ ಎಂದು ಕೋರಿದರು.

ADVERTISEMENT

‌2019ರ ಜನವರಿಗೂ ಮೊದಲು ಇದ್ದ ಮೀಸಲು ಕೋಟಾ ವ್ಯವಸ್ಥೆಯನ್ನೇ ದೇಶದಾದ್ಯಂತ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೌನ್ಸೆಲಿಂಗ್ ಪ್ರಾರಂಭಿಸಲು ಅವಕಾಶ ನೀಡುವಂತೆ ನ್ಯಾಯಪೀಠವನ್ನು ಕೋರಿದ ಮೆಹ್ತಾ ಅವರು, ಏತನ್ಮಧ್ಯೆ ಪೀಠವು ಈ ಕುರಿತ ಆಕ್ಷೇಪಣೆಗಳನ್ನು ಪರಿಗಣಿಸಬಹುದು ಎಂದರು.

ಕೌನ್ಸೆಲಿಂಗ್‌ ಆರಂಭಿಸುವ ಕುರಿತ ಮೆಹ್ತಾ ಕೋರಿಕೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಪೀಠವು ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಶ್ಯಾಮ್ ದಿವಾನ್ ಅವರನ್ನು ಕೇಳಿತು.

ಈ ಕುರಿತ ವಿಚಾರಣೆಯನ್ನು ನ್ಯಾಯಪೀಠ ಗುರುವಾರವೂ ಮುಂದುವರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.