ಕೋಟಾ: ಜಮ್ಮು–ಕಾಶ್ಮೀರದ ನೀಟ್ ಆಕಾಂಕ್ಷಿಯೊಬ್ಬರು ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಜೀಶಾನ್ (18) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಕೋಟಾದಲ್ಲಿ ಈ ವರ್ಷ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ 15ನೇ ಪ್ರಕರಣ ಇದಾಗಿದ್ದು, ಒಂದೇ ತಿಂಗಳಿನಲ್ಲಿ ನಡೆದ 2ನೇ ಪ್ರಕರಣವೂ ಆಗಿದೆ.
ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ, ಕೋಟಾದ ಪ್ರತಾಪ್ ಚೌರಾಹ್‌ನ ಪಿ.ಜಿಯೊಂದರಲ್ಲಿ ಜೀಶಾನ್ ವಾಸವಿದ್ದರು. ಭಾನುವಾರ ಬುರ್ಹಾನ್ ಎಂಬ ತಮ್ಮ ಸಂಬಂಧಿಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿದ್ದಾರೆ. ತಕ್ಷಣವೇ ಬುರ್ಹಾನ್, ಜೀಶಾನ್ ವಾಸವಿದ್ದ ಪಿ.ಜಿಯಲ್ಲಿದ್ದ ಮಮತಾ ಎಂಬ ಯುವತಿಗೆ ಕರೆ ಮಾಡಿ, ವಿಚಾರ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಜೀಶಾನ್ ತಮ್ಮ ಕೊಠಡಿಯಲ್ಲಿದ್ದ ಫ್ಯಾನ್‌ಗೆ ನೇಣುಹಾಕಿಕೊಂಡು ಮೃತಪಟ್ಟಿದ್ದರು ಎನ್ನಲಾಗಿದೆ.
ಈ ಹಿಂದೆಯೂ ಕೋಟಾದಲ್ಲಿದ್ದ ಜೀಶಾನ್, ನೀಟ್ ತರಬೇತಿ ಕೇಂದ್ರವೊಂದರಲ್ಲಿ ನೋಂದಣಿ ಪಡೆದಿದ್ದರು. ಬಳಿಕ ಊರಿಗೆ ತೆರಳಿದ್ದ ಅವರು, ಒಂದು ತಿಂಗಳ ಹಿಂದೆಯಷ್ಟೆ ಕೋಟಾಗೆ ಮರಳಿದ್ದರು. ಆದರೆ, ಈ ಬಾರಿ ಯಾವುದೇ ಕೇಂದ್ರದಲ್ಲೂ ನೋಂದಣಿ ಪಡೆದಿರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ಕೋಟಾ ನಗರದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ವಿಚಾರವಾಗಿ ರಾಜಸ್ಥಾನ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಶ್ನಿಸಿತ್ತು. ಅದರ ಬೆನ್ನಲ್ಲೇ ಈ ಪ್ರಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.