ನವದೆಹಲಿ: ನೀಟ್–ಯುಜಿ 2024ರ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ 26 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತಕ್ಷಣವೇ ಅಮಾನತಿನಲ್ಲಿ ಇರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಸೂಚನೆ ನೀಡಿದೆ.
ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಅಕ್ರಮದಲ್ಲಿ ತೊಡಗಿದ್ದ 14 ವಿದ್ಯಾರ್ಥಿಗಳ 2024–25ನೇ ಸಾಲಿನ ಪ್ರವೇಶವನ್ನು ರದ್ದುಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಬರೆಯಲಾಗುತ್ತದೆ. ನೀಟ್–ಯುಜಿ 2024ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಭಾಗವಾಗಿ, ಅಕ್ರಮ ಆಗಿರುವ ನಿದರ್ಶನಗಳನ್ನು ಗುರುತಿಸಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು 42 ವಿದ್ಯಾರ್ಥಿಗಳನ್ನು ಮೂರು ವರ್ಷಗಳಿಗೆ (2024, 2025 ಮತ್ತು 2026) ನೀಟ್–ಯುಜಿ ಪರೀಕ್ಷೆಯಿಂದ ಡಿಬಾರ್ ಮಾಡಿದೆ.
ಒಟ್ಟು ಒಂಬತ್ತು ವಿದ್ಯಾರ್ಥಿಗಳನ್ನು 2025 ಮತ್ತು 2026ನೆಯ ಸಾಲಿನ ಪರೀಕ್ಷೆಗಳಿಂದ ಡಿಬಾರ್ ಮಾಡಿದೆ. ಸಿಬಿಐ ತನಿಖೆಯಲ್ಲಿ ಗೊತ್ತಾಗಿರುವ ಅಂಶಗಳನ್ನು ಆಧರಿಸಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
‘ಅಕ್ರಮಗಳ ತೀವ್ರತೆ ಹಾಗೂ ಆ ಅಕ್ರಮಗಳು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ಸಾಧ್ಯತೆಯನ್ನು ಪರಿಗಣಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳಿಗೆ ಈ ನಿರ್ದೇಶನ ನೀಡಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.