ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ‘ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ’ಯನ್ನು (ನೀಟ್–ಯುಜಿ) ಮೇ 4ರಂದು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ಹೇಳಿದೆ.
‘ನೀಟ್–ಯುಜಿ’ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುಕ್ರವಾರದಿಂದಲೇ ಆರಂಭವಾಗಿದ್ದು, ಮಾರ್ಚ್ 7 ಕೊನೆಯ ದಿನ ಎಂದು ಎನ್‌ಟಿಎ ಪ್ರಕಟಣೆ ತಿಳಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದೆ.
ಎಂಬಿಬಿಎಸ್ ಕೋರ್ಸ್‌ನಲ್ಲಿ ದೇಶದಾದ್ಯಂತ ಲಭ್ಯವಿರುವ 1,08,000 ಸೀಟುಗಳ ಭರ್ತಿ ಈ ಪರೀಕ್ಷೆ ಮೂಲಕ ನಡೆಯಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 56,000 ಸೀಟುಗಳಿದ್ದರೆ, ಖಾಸಗಿ ಕಾಲೇಜುಗಳಲ್ಲಿ 52,000 ಸೀಟುಗಳಿವೆ. 2024ನೇ ಸಾಲಿನಲ್ಲಿ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ‘ನೀಟ್–ಯುಜಿ’ ತೆಗೆದುಕೊಂಡಿದ್ದರು.
ಈ ಪರೀಕ್ಷೆಯ ಫಲಿತಾಂಶಗಳನ್ನು ಆಧರಿಸಿ ದಂತ, ಆಯುರ್ವೇದ, ಯುನಾನಿ ಮತ್ತು ಸಿದ್ಧ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯೂ ನಡೆಯುತ್ತದೆ. ‘ನೀಟ್–ಯುಜಿ’ ಅನ್ನು ಪೇಪರ್ ಮತ್ತು ಪೆನ್ ವಿಧಾನದಲ್ಲಿ ನಡೆಸಲಾಗುವುದು ಎಂದು ಎನ್‌ಟಿಎ ಕಳೆದ ತಿಂಗಳು ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.