ADVERTISEMENT

ಮುಂಬೈನ ಹೊಸ ಪೊಲೀಸ್‌ ಕಮಿಷನರ್‌ ಪರಮವೀರ್ ಸಿಂಗ್‌

ಪಿಟಿಐ
Published 29 ಫೆಬ್ರುವರಿ 2020, 19:45 IST
Last Updated 29 ಫೆಬ್ರುವರಿ 2020, 19:45 IST
ಪರಮ್ ವೀರ್‌ ಸಿಂಗ್
ಪರಮ್ ವೀರ್‌ ಸಿಂಗ್   

ಮುಂಬೈ: ಹಿರಿಯ ಐಪಿಎಸ್‌ ಅಧಿಕಾರಿ ಪರಮವೀರ್‌ ಸಿಂಗ್‌ ಅವರನ್ನು ಮುಂಬೈನ ನೂತನ ಪೊಲೀಸ್‌ ಕಮಿಷನರ್‌ ಆಗಿ ಶನಿವಾರ ನೇಮಕ ಮಾಡಲಾಗಿದೆ.

1988ರ ಬ್ಯಾಚ್‌ನ ಅಧಿಕಾರಿಯಾಗಿರುವ ಸಿಂಗ್‌, ಶನಿವಾರವಷ್ಟೇ ನಿವೃತ್ತಿಹೊಂದಿದ ಸಂಜಯ್ ಬರ್ವೆ ಅವರಿಂದ ಅಧಿಕಾರ ಸ್ವೀಕರಿಸಿದರು. ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ ಅವರು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿಜಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಂಗ್‌ ಅವರು ಎಸಿಬಿ ಡಿಜಿಯಾಗಿದ್ದ ಸಂದರ್ಭದಲ್ಲಿಯೇ, ಎನ್‌ಸಿಪಿ ನಾಯಕ, ಈಗ ಉಪಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಅವರಿಗೆ ಬಹುಕೋಟಿ ನೀರಾವರಿ ಹಗರಣದಲ್ಲಿ ಕ್ಲೀನ್‌ ಚಿಟ್‌ ನೀಡಿದ್ದರು.

ADVERTISEMENT

ಈ ಹಿಂದೆ ಪೊಲೀಸ್‌ ಕಮಿಷನರ್‌ ಆಗಿದ್ದ ಬರ್ವೆ, ಮುಂಬೈ ಪೊಲೀಸ್ ಇಲಾಖೆಯ ದಾಖಲಾತಿ, ಕಾಗದಪತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸುವ ಕಾರ್ಯದ ಗುತ್ತಿಗೆಯನ್ನು, ಪತ್ನಿ ಹಾಗೂ ಪುತ್ರನ ಒಡೆತನ ಕಂಪನಿಗೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಮಹಿಳೆಯರ ಸುರಕ್ಷತೆಗೆ ಒತ್ತು: ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್‌, ‘ಮಹಾನಗರದಲ್ಲಿ ಮಹಿಳೆಯರಿಗೆ ಸುರಕ್ಷತೆ ಖಾತರಿಪಡಿಸುವುದಕ್ಕೆ ಆದ್ಯತೆ ನೀಡುವುದಾಗಿ’ ಹೇಳಿದರು.

ಭೂಗತ ಚಟುವಟಿಕೆಗಳ ಮೇಲೆ, ಒತ್ತೆ ಇರಿಸುವುದು ಹಾಗೂ ಅಪರಾಧ ಕೃತ್ಯಗಳ ನಿಗ್ರಹಕ್ಕೆ ಒತ್ತು ನೀಡಲಾಗುವುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.