ADVERTISEMENT

ಲೈಂಗಿಕ ದೌರ್ಜನ್ಯದ ಸಾಕ್ಷ್ಯ ಸಂಗ್ರಹ: ಮಾರ್ಗಸೂಚಿ ಬಿಡುಗಡೆ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 15:39 IST
Last Updated 16 ಡಿಸೆಂಬರ್ 2020, 15:39 IST
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ   

ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ವಿಧಿವಿಜ್ಞಾನದ ಸಾಕ್ಷ್ಯಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ.

ಸಂತ್ರಸ್ತರಿಂದ ಸಾಕ್ಷ್ಯ ಸಂಗ್ರಹಿಸುವುದು ಮತ್ತು ಪರಿಶೀಲನೆ ಒಳಪಡಿಸುವುದು ವಿಳಂಬವಾಗುತ್ತಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಹೀಗಾಗಿ, ಆಯೋಗ ಈ ಕ್ರಮಕೈಗೊಂಡಿದೆ.

ಸಂತ್ರಸ್ತರ ಗುರುತು ಯಾವುದೇ ರೀತಿಯಲ್ಲಿ ಬಹಿರಂಗವಾದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕಿಂತಲೂ ಸಂತಸ್ತೆಗೆ ಚಿಕಿತ್ಸೆ ನೀಡಲು ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕವೂ ಪ್ರಯೋಗಾಲಯಕ್ಕೆ ಕಳುಹಿಸುವುದನ್ನು ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ, ಸಾಕ್ಷ್ಯಗಳ ಮಾದರಿಗಳು ನಿಷ್ಪ್ರಯೋಜಕವಾಗುತ್ತಿವೆ ಎಂದು ಆಯೋಗ ತಿಳಿಸಿದೆ.

ಸಂತ್ರಸ್ತೆಯ ದೇಹದಿಂದ ವೀರ್ಯಾಣು ಸಂಗ್ರಹಿಸುವುದು ವಿಳಂಬ ಮಾಡುವುದರಿಂದ ಮಹತ್ವದ ವೈಜ್ಞಾನಿಕ ಸಾಕ್ಷ್ಯಗಳು ನಾಶವಾಗುತ್ತಿವೆ. ಇದರಿಂದ, ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಮಾರ್ಗದರ್ಶಿ ಸೂತ್ರಗಳನ್ನು ವಿವಿಧ ವಿಭಾಗಗಳನ್ನಾಗಿ ಮಾಡಲಾಗಿದೆ. ಸಂತ್ರಸ್ತೆಯ ರಕ್ಷಣೆ, ತ್ವರಿತಗತಿಯಲ್ಲಿ ಪ್ರಾಮಾಣಿಕತೆಯಿಂದ ತಪಾಸಣೆ, ಮಾದರಿಗಳ ಸಂಗ್ರಹ, ರಕ್ತ ಮತ್ತು ಮೂತ್ರದ ಮಾದರಿಗಳ ಸಂಗ್ರಹ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸುವುದು ಮತ್ತು ಇತರ ಸಾಮಾನ್ಯ ಕಾರ್ಯಗಳು ಎಂದು ವಿಭಾಗಗಳನ್ನಾಗಿ ಮಾಡಲಾಗಿದೆ.

ಸಂತ್ರಸ್ತೆಗೆ ವೈದ್ಯರು ತಪಾಸಣೆ ಕ್ರಮಗಳನ್ನು ವಿವರಿಸಬೇಕು. ಸಂತ್ರಸ್ತೆಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕವೇ ಪೊಲೀಸರಿಗೆ ವರದಿ ಮಾಡಬಹುದು. ತಪಾಸಣೆಗೆ ಪೊಲೀಸರಿಂದ ಕೋರಿಕೆ ಅಥವಾ ನ್ಯಾಯಾಲಯದ ಆದೇಶದ ಅಗತ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.