ADVERTISEMENT

ಬೆಂಗಳೂರಲ್ಲಿ ಖೋಟಾ ನೋಟು ಜಾಲ: ಸೆರೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 20:05 IST
Last Updated 19 ಅಕ್ಟೋಬರ್ 2018, 20:05 IST
ನಕಲಿ ನೋಟು –ಸಾಂದರ್ಭಿಕ ಚಿತ್ರ
ನಕಲಿ ನೋಟು –ಸಾಂದರ್ಭಿಕ ಚಿತ್ರ   

ಗುವಾಹಟಿ: ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ನಕಲಿ ನೋಟು ಚಲಾವಣೆ ಜಾಲದ ಪ್ರಮುಖ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಸ್ಸಾಂನಲ್ಲಿ ಬಂಧಿಸಿದೆ.

ಹೈದರಾಬಾದ್‌ನಿಂದ ಬಂದಿದ್ದ ಎನ್‌ಐಎ ಸಿಬ್ಬಂದಿ ಗುರುವಾರ ಅಕ್ಬರ್‌ ಅಲಿ ಎಂಬಾತನನ್ನು ಗುವಾಹಟಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಈತ ಅಸ್ಸಾಂನ ಕಾಮರೂಪ ಜಿಲ್ಲೆಯ ಗೊರೊಯಿಮಾರಿ ಗ್ರಾಮದ ನಿವಾಸಿ.

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಜಾಲದೊಂದಿಗೆ ಆರೋಪಿ ನಿಕಟ ಸಂಪರ್ಕ ಹೊಂದಿದ್ದ. ಅಲ್ಲಿಂದ ನಕಲಿ ನೋಟುಗಳನ್ನು ತಂದು ಬೆಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ.ಗರಿಷ್ಠ ಮುಖಬೆಲೆಯ ನಕಲಿ ನೋಟುಗಳನ್ನುಅಂತರರಾಷ್ಟ್ರೀಯ ಗಡಿಗಳಲ್ಲಿ ಸಂಗ್ರಹಿಸಿ ದೇಶದ ನಾನಾಕಡೆ ಚಲಾವಣೆ ಮಾಡುವ ದಂಧೆಯಲ್ಲಿ ತೊಡಗಿದೆ.

ADVERTISEMENT

ಬೆಂಗಳೂರು ಸಂಪರ್ಕ ಹೇಗೆ?:2007ರಲ್ಲಿ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದಿದ್ದ ಅಕ್ಬರ್‌ ಅಲಿ ಹೂವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.

ಇದೇ ವೇಳೆ ನಕಲಿ ನೋಟು ಚಲಾವಣೆ ದಂಧೆಯಲ್ಲಿ ತೊಡಗಿದ್ದ ತನ್ನ ಚಿಕ್ಕಪ್ಪ ಹಕೀಮ್‌ ಸಂಪರ್ಕಕ್ಕೆ ಬಂದ. ನಂತರ ಆತನೂ ಅದೇ ಕೆಲಸದಲ್ಲಿ ತೊಡಗಿದ್ದ.

ಬೆಂಗಳೂರಿನಲ್ಲಿ ನಕಲಿ ನೋಟು ಚಲಾವಣೆ ದಂಧೆಗೆ ಅಗತ್ಯ ಮೂಲಸೌಕರ್ಯ ಮತ್ತು ತಂಡ ರಚಿಸುವಲ್ಲಿ ಅಕ್ಬರ್‌ ಅಲಿ ಪ್ರಮುಖ ಪಾತ್ರ ವಹಿಸಿದ್ದ.

ಕೃತ್ಯ ಬೆಳಕಿಗೆ ಬಂದದ್ದು ಹೇಗೆ?:ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸದ್ದಾಂ ಹುಸೇನ್‌ ಎಂಬಾತನನ್ನು ಬಂಧಿಸಿದ್ದ ಪೊಲೀಸರು ಆತನಿಂದ ₹5 ಲಕ್ಷ ಮೊತ್ತದ ಖೊಟ್ಟಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಪೊಲೀಸರ ತನಿಖೆ ವೇಳೆ ಆರೋಪಿಯು ನಕಲಿ ನೋಟು ಚಲಾವಣೆ ಜಾಲದ ಕರಾಳ ದಂಧೆಯ ಬಗ್ಗೆ ಬಾಯ್ಬಿಟ್ಟಿದ್ದ.

ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಬೆಂಗಳೂರಿನಲ್ಲಿ ಈ ಜಾಲ ಸಕ್ರಿಯವಾಗಿರುವ ಬಗ್ಗೆ ಆತ ಬಾಯ್ಬಿಟ್ಟಿದ್ದ. ದಂದೆಯಲ್ಲಿ ತೊಡಗಿದ್ದ ಸದಸ್ಯರ ಬಗ್ಗೆಯೂ ಮಾಹಿತಿ ನೀಡಿದ್ದ.

ಅಮೀರುಲ್‌ ಹಕ್‌ ಎಂಬ ಮತ್ತೊಬ್ಬ ಆರೋಪಿಯ ನಿರ್ದೇಶನದ ಮೇರೆಗೆ 2015ರಲ್ಲಿ ನಾಲ್ಕು ಬಾರಿ ಮಾಲ್ಡಾಕ್ಕೆ ತೆರಳಿದ್ದ ಸದ್ದಾಂ ಹುಸೇನ್‌, ಅಲ್ಲಿ ರುಸ್ತುಂ ಎಂಬಾನಿಂದ ಖೊಟ್ಟಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ.

ಸದ್ದಾಂ ಹುಸೇನ್‌ ನೀಡಿದ ಸುಳಿವಿನ ಮೇರೆಗೆ ಹೈದರಾಬಾದ್‌ ಎನ್‌ಐಎ ಸಿಬ್ಬಂದಿ ಉಳಿದ ಆರೋಪಿಗಳನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.