ADVERTISEMENT

ಸುಧಾ ಭಾರದ್ವಾಜ್‌ಗೆ ಜಾಮೀನು ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ‘ಸುಪ್ರೀಂ’ಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 13:53 IST
Last Updated 6 ಡಿಸೆಂಬರ್ 2021, 13:53 IST

ನವದೆಹಲಿ (ಪಿಟಿಐ): ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್‌ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಎನ್‌ಐಎ ಸುಪ್ರೀಂ ಕೊರ್ಟ್‌ಗೆ ಸೋಮವಾರ ಮನವಿ ಮಾಡಿದೆ.

ಹೈಕೋರ್ಟ್‌ ಆದೇಶ ಡಿ.8ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಎನ್‌ಐಎ ಪರವಾಗಿ ಕೋರ್ಟ್‌ಗೆ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ,ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮ ಕೋಹ್ಲಿ ಅವರಿದ್ದ ಪೀಠಕ್ಕೆ ತಿಳಿಸಿದರು.

ಅಲ್ಲದೆ ಇದೇ ಕಾರಣಕ್ಕೆ ಅರ್ಜಿ ವಿಚಾರಣೆ ತ್ವರಿತವಾಗಿ ನಡೆಯಬೇಕು ಎಂದು ಅವರು ಕೋರಿದರು.

ADVERTISEMENT

ಸುಧಾ ಭಾರದ್ವಾಜ್‌ ಅವರಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಎನ್‌ಐಎ ಡಿ. 2ರಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಎನ್‌ಐಎ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಪೀಠ ಹೇಳಿದೆ.2018ರ ಭೀಮಾ ಕೊರೆಗಾಂವ್‌ ಮತ್ತು ಎಲ್ಗಾರ್ ಪರಿಷದ್‌ ಪ್ರಕರಣ ಸಂಬಂಧ ಸುಧಾ ಭಾರದ್ವಾಜ್‌ ಅವರನ್ನು ಪುಣೆ ಪೊಲೀಸರು 2018 ಅ.27ರಂದು ಬಂಧಿಸಿದ್ದರು. ತಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದ್ದ ನ್ಯಾಯಾಧೀಶರು ಕೇಂದ್ರ ಸರ್ಕಾರ ನೇಮಿಸಿದ್ದ ನ್ಯಾಯಾಧೀಶರಾಗಿರಲಿಲ್ಲ ಎಂಬ ಕಾರಣ ನೀಡಿ ಸುಧಾ ಭಾರದ್ವಾಜ್‌ ಅವರು ಬಾಂಬೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. 2019ರ ಫೆ.21ರಂದು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.