ನಿತಿನ್ ಗಡ್ಕರಿ
–ಪಿಟಿಐ ಚಿತ್ರ
ನಾಗ್ಪುರ: ‘ಕಳೆದ 11 ವರ್ಷಗಳಲ್ಲಿ ಏನು ನೀವು ನೋಡಿದ್ದೀರೋ ಅವೆಲ್ಲವೂ ‘ನ್ಯೂಸ್ ರೀಲ್’. ನಿಜವಾದ ಚಿತ್ರ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
2029ರ ಚುನಾವಣೆಯಲ್ಲಿ ತಮ್ಮ ಪಾತ್ರ ಏನಾಗಿರಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಪಕ್ಷವು ಅದರ ಕಾರ್ಯಕರ್ತರಿಗೆ ಯಾವ ಜವಾಬ್ದಾರಿ ನೀಡಬೇಕು ಎಂದು ನಿರ್ಧರಿಸಲಿದೆ. ಅದಕ್ಕೆ ತಕ್ಕಂತೆ ನಾನು ಕೆಲಸ ಮಾಡಲಿದ್ದೇನೆ’ ಎಂದಿದ್ದಾರೆ.
‘ನಾನು ಎಂದಿಗೂ ನನ್ನ ರಾಜಕೀಯ ಬಯೋಡಾಟಾವನ್ನು ಪ್ರಕಟಿಸಿದವನಲ್ಲ ಅಥವಾ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಪಡೆಯಲು ದೊಡ್ಡ ಕಾರ್ಯಕರ್ತರ ಪಡೆ ಕಟ್ಟಿಕೊಂಡವನಲ್ಲ. ನನ್ನ ಉದ್ದೇಶವಿರುವುದು ವಿದರ್ಭದಲ್ಲಿ ರೈತರ ಆತ್ಮಹತ್ಯೆ ತಡೆಯುವ ಕಡೆ ಮಾತ್ರ. ರಸ್ತೆ ಕಾಮಗಾರಿಗಿಂತ ಕೃಷಿ ಮತ್ತು ಸಮಾಜ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬಯಸುತ್ತೇನೆ’ ಎಂದು ಗಡ್ಕರಿ ಹೇಳಿದರು.
ಭಾರತದ ತಲಾದಾಯ ಜಗತ್ತಿನ ಮೊದಲ 10 ರಾಷ್ಟ್ರಗಳ ಪಟ್ಟಿಯಲ್ಲಿವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತಿನ್ ಗಡ್ಕರಿ, ‘ಇದಕ್ಕೆ ದೇಶದ ಜನಸಂಖ್ಯೆಯನ್ನೇ ದೂಷಿಸಬೇಕು. ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ವಿಸ್ತರಿಸಲು ಬೆಂಬಲಿಸಬೇಕಿದೆ. ಇದು ಯಾವುದೇ ಧರ್ಮ ಅಥವಾ ಭಾಷೆಯ ವಿಷಯವಲ್ಲ. ಇದು ದೇಶದ ಆರ್ಥಿಕ ಸಮಸ್ಯೆ. ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ, ಅದರ ಫಲಿತಾಂಶ ಕಾಣಿಸುತ್ತಿಲ್ಲ. ಇವೆಲ್ಲದಕ್ಕೂ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣ’ ಎಂದರು.
2014ರಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಗಡ್ಕರಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.