ADVERTISEMENT

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹೊಗಳಿದ ಎನ್‌ಸಿಪಿ ನಾಯಕ ಶರದ್ ಪವಾರ್

ಪಿಟಿಐ
Published 2 ಅಕ್ಟೋಬರ್ 2021, 13:32 IST
Last Updated 2 ಅಕ್ಟೋಬರ್ 2021, 13:32 IST
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್   

ಪುಣೆ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮಗಿರುವ ಅಧಿಕಾರವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಗಾಗಿ ಬಳಸುತ್ತಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಶ್ಲಾಘಿಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಎದುರಾಳಿ ಪಕ್ಷಗಳ ಇಬ್ಬರು ನಾಯಕರು ವೇದಿಕೆ ಹಂಚಿಕೊಂಡಿದ್ದರು.

'ನಾನು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಏಕೆಂದರೆ, ನಗರದಲ್ಲಿ ಬಹುಕಾಲದಿಂದಲೂ ಹಾಗೆಯೇ ಉಳಿದಿದ್ದ ಸಮಸ್ಯೆಗಳನ್ನು ಪರಿಹರಿಸುವ ಅನೇಕ ಯೋಜನೆಗಳನ್ನು ಅಹ್ಮದ್ ನಗರದಲ್ಲಿ ಗಡ್ಕರಿ ಉದ್ಘಾಟಿಸಲಿದ್ದಾರೆ ಎಂದು ನನಗೆ ತಿಳಿಸಲಾಯಿತು ಮತ್ತು ಈ ವೇಳೆ ನಾನು ಹಾಜರಿರಬೇಕೆಂದು ಅವರು ಬಯಸಿದ್ದರು' ಎಂದು ಪವಾರ್ ಹೇಳಿದರು.

'ಯಾವುದೇ ಒಂದು ಯೋಜನೆಗೆ ಶಿಲಾನ್ಯಾಸ ಸಮಾರಂಭ ನಡೆದಾಗ ಅದು ಅಲ್ಲಿಂದಾಚೆಗೆ ಏನು ಆಗುವುದಿಲ್ಲ. 'ಆದರೆ ಗಡ್ಕರಿಯವರ ಯೋಜನೆಗಳ ವಿಷಯಕ್ಕೆ ಬಂದರೆ, ಕೆಲವೇ ದಿನಗಳಲ್ಲಿ ಅವುಗಳ ಕಾರ್ಯ ಪ್ರಾರಂಭವಾಗುತ್ತದೆ. ದೇಶದ ಅಭಿವೃದ್ಧಿಗೆ ಜನಪ್ರತಿನಿಧಿಯೊಬ್ಬರು ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಗಡ್ಕರಿ ಉತ್ತಮ ಉದಾಹರಣೆ' ಎಂದು ಎನ್‌ಸಿಪಿ ನಾಯಕ ಹೇಳಿದರು.

ADVERTISEMENT

'ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲೇ ಸುಮಾರು 5,000 ಕಿಮೀ ರಸ್ತೆ ಕೆಲಸ ಮಾಡಿದ್ದರು ಎಂಬುದು ನನಗೆ ನೆನಪಿದೆ. ಆದರೆ ಅವರು ಅಧಿಕಾರ ವಹಿಸಿಕೊಂಡ ನಂತರ ಈ ಸಂಖ್ಯೆ 12,000 ಕಿಮೀ ದಾಟಿದೆ' ಎಂದು ಹೇಳಿದರು.

ಮಾಜಿ ಕೇಂದ್ರ ಕೃಷಿ ಸಚಿವರು, ಕಬ್ಬಿನ ಬಳಕೆಯು ಸಕ್ಕರೆ ಉತ್ಪಾದನೆಗೆ ಮಾತ್ರ ಸೀಮಿತವಾಗಿರುವುದಿಲ್ಲ ಮತ್ತು ಅದನ್ನು ಎಥೆನಾಲ್‌ನ ಕಚ್ಚಾ ವಸ್ತುವನ್ನಾಗಿಯೂ ಪರಿಗಣಿಸಬೇಕು ಎಂದು ಈ ಪ್ರದೇಶದ ರೈತರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.