ಕೊಚ್ಚಿ (ಪಿಟಿಐ): ವಯನಾಡ್‌ನಲ್ಲಿ ಕಳೆದ ವರ್ಷ ಜುಲೈನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟಕ್ಕೊಳಗಾದ ಜನರ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಕೇರಳ ಹೈಕೋರ್ಟ್‌ಗೆ ತಿಳಿಸಿದೆ.
ಬದಲಾಗಿ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅನ್ವಯವಾಗುವ ಆರ್‌ಬಿಐ ಸೂಚನೆಯ ಅನುಸಾರವಾಗಿ ಅವರ ಸಾಲದ ಮರುಪಾವತಿ ಅವಧಿಯನ್ನು ಮರುನಿಗದಿ ಮಾಡಬಹುದು ಎಂದು ತಿಳಿಸಿದೆ.
ನೈಸರ್ಗಿಕ ವಿಕೋಪ ಸಂದರ್ಭದಲ್ಲಿ, ಸಾಲದ ಮರುಪಾವತಿ ಅವಧಿಯನ್ನು ಮುಂದೂಡಲು ಮತ್ತು ಹೊಸ ಸಾಲ ತೆಗೆದುಕೊಳ್ಳಲು ಆರ್‌ಬಿಐ ನಿಯಮವು ಅನುವು ಮಾಡಿಕೊಡುತ್ತದೆ.
ಸಂತ್ರಸ್ತರು ಪಡೆದ ಸಾಲವನ್ನು ಮನ್ನಾ ಮಾಡಬಹುದೇ ಎಂದು ತಿಳಿಸುವಂತೆ ಕೋರ್ಟ್ ಸರ್ಕಾರವನ್ನು ಕೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವಾಲಯವು, ಕಳೆದ ವರ್ಷ ಆಗಸ್ಟ್ 19ರಂದು ರಾಜ್ಯಮಟ್ಟದ ಬ್ಯಾಂಕ್ ಅಧಿಕಾರಿಗಳ ಸಮಿತಿಯೊಂದಿಗೆ ವಿಶೇಷ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಭಾಗಿಯಾಗಿದ್ದರು. ಸಭೆಯಲ್ಲಿ ಆರ್‌ಬಿಐ ಸೂಚನೆ ಪ್ರಕಾರ ಅನ್ವಯವಾಗುವ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.