ADVERTISEMENT

SSC ಪರೀಕ್ಷೆಯನ್ನು ಹಿಂದಿಯಲ್ಲಿ ಮಾತ್ರ ನಡೆಸುವ ಪ್ರಸ್ತಾವವಿಲ್ಲ: ಕೇಂದ್ರ ಸಚಿವ

ಪಿಟಿಐ
Published 8 ಡಿಸೆಂಬರ್ 2022, 13:57 IST
Last Updated 8 ಡಿಸೆಂಬರ್ 2022, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗದ (ಎಸ್ಎಸ್‌ಸಿ) ಪರೀಕ್ಷೆಗಳನ್ನು ಹಿಂದಿಯಲ್ಲಿ ಮಾತ್ರ ನಡೆಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ವಿಷಯವನ್ನೂ ತಳ್ಳಿಹಾಕಿದ ಮಿಶ್ರಾ, ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ (2020)ಯು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಅಳವಡಿಸುವ ಸಲುವಾಗಿ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುತ್ತಿದೆ. ಪ್ರವೇಶ ಮತ್ತು ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) ಹೆಚ್ಚಿಸಲು ಮತ್ತು ದ್ವಿಭಾಷಾ ಕಾರ್ಯಕ್ರಮಗಳನ್ನು ನೀಡಲು ಯೋಜಿಸಿದೆ. ಎಲ್ಲಾ ಭಾರತೀಯ ಭಾಷೆಗಳ ಶಕ್ತಿ, ಬಳಕೆ ಹೆಚ್ಚಿಸಿ ಚೈತನ್ಯ ನೀಡಲಿದೆ ಎಂದು ಮಿಶ್ರಾ ಹೇಳಿದರು.

ADVERTISEMENT

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಎಸ್‌ಎಸ್‌ಸಿ ಕೇಂದ್ರ ಸರ್ಕಾರದ ಪ್ರಮುಖ ನೇಮಕಾತಿ ಏಜೆನ್ಸಿಗಳಾಗಿವೆ. ಎರಡು ಆಯೋಗಗಳು ನಡೆಸುವ ಪ್ರಾಥಮಿಕ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಹು ಆಯ್ಕೆಯ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ ಎಂದು ಅವರು ತಿಳಿಸಿದರು.

ಯುಪಿಎಸ್‌ಸಿ ಮೇನ್ಸ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಭಾಷೆ ಮತ್ತು ಸಾಹಿತ್ಯದ ಪತ್ರಿಕೆಗಳನ್ನು ಹೊರತುಪಡಿಸಿ ಇನ್ನಿತರೆ ವಿಷಯಗಳನ್ನು ಯಾವುದೇ ಪ್ರಾದೇಶಿಕ ಭಾಷೆಯಲ್ಲಾದರೂ ಬರೆಯಬಹುದು. ಎಸ್‌ಎಸ್‌ಸಿ ನಡೆಸುವ ಪರೀಕ್ಷೆಗಳ ಮಾಧ್ಯಮವು ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ ಆಗಿರಲಿದೆ. ಮಲ್ಟಿ-ಟಾಸ್ಕಿಂಗ್ (ತಾಂತ್ರಿಕವಲ್ಲದ) ಸಿಬ್ಬಂದಿ ಪರೀಕ್ಷೆಯ ಪೇಪರ್-II ಅನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ ಭಾಷೆಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.