ADVERTISEMENT

ಕೋವಿಡ್‌ ಲಸಿಕೆಯ ಪ್ರತಿಕೂಲ ಪರಿಣಾಮ ಬಹಿರಂಗಪಡಿಸಿ

ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್‌

ಪಿಟಿಐ
Published 2 ಮೇ 2022, 14:45 IST
Last Updated 2 ಮೇ 2022, 14:45 IST
   

ನವದೆಹಲಿ: ಕೋವಿಡ್‌ ವಿರುದ್ಧದ ಲಸಿಕೆ ಹಾಕಿಸಿಕೊಳ್ಳುವಂತೆ ಯಾರನ್ನೂ ಬಲವಂತ ಮಾಡುವಂತಿಲ್ಲ. ಲಸಿಕೆ ಹಾಕಿಸಿದ್ದರಿಂದ ಆದ ಪ್ರತಿಕೂಲ ಪರಿಣಾಮಗಳನ್ನುಸರ್ಕಾರವು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಇರುವವರೆಗೆ ಸಾರ್ವಜನಿಕ ಸ್ಥಳಗಳ ಪ್ರವೇಶವನ್ನು ನಿಷೇಧಿಸಬಾರದು ಎಂದುನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ಬಿ. ಆರ್‌. ಗವಾಯಿ ಅವರ ಪೀಠವು ಸಲಹೆ ಕೊಟ್ಟಿದೆ.

ಲಭ್ಯವಿರುವ ದಾಖಲೆಗಳು ಮತ್ತು ಪರಿಣತರ ಅಭಿಪ್ರಾಯ ಪ್ರಕಾರ, ಈಗಿನ ಕೋವಿಡ್‌ ಲಸಿಕೆ ನೀತಿಯು ಸ್ವೇಚ್ಛಾಚಾರಿ ಮತ್ತು ವಿವೇಕರಹಿತ ಎನ್ನುವಂತಿಲ್ಲ ಎಂದು ಪೀಠವು ಹೇಳಿದೆ.

ADVERTISEMENT

ಲಸಿಕೆಯಿಂದಾದ ಪ್ರತಿಕೂಲ ಪರಿಣಾಮಗಳ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಿರುವ ವೇದಿಕೆಯಲ್ಲಿ ಪ್ರಕಟಿಸಬೇಕು. ಆದರೆ ವೈಯಕ್ತಿಕ ಮಾಹಿತಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ‍ಪೀಠವು ಸೂಚಿಸಿದೆ.

ಲಸಿಕಾ ಅಭಿಯಾನದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮಾಜಿ ಸದಸ್ಯ ಡಾ. ಜೇಕಬ್‌ ಪುಳಿಯಿಲ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಲಸಿಕೆಯಿಂದಾದ ಪ್ರತಿಕೂಲ ಪರಿಣಾಮಗಳನ್ನು ಬಹಿರಂಗಪಡಿಸಲು ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

‘ಕೇಂದ್ರ ಸರ್ಕಾರವುಮಕ್ಕಳಿಗೆ ಲಸಿಕೆ ಹಾಕಿಸುವಿಕೆ ವಿಚಾರದಲ್ಲಿ ಕೈಗೊಂಡ ನಿರ್ಧಾರವು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿದೆ. ನಿಯಂತ್ರಣ ಪ್ರಾಧಿಕಾರಗಳು ಈಗಾಗಲೇ ಅನುಮೋದನೆ ನೀಡಿರುವ ಪ್ರಯೋಗದ ವಿವಿಧ ಹಂತಗಳಲ್ಲಿ ದೊರೆತ ಮಹತ್ವದ ಮಾಹಿತಿಗಳನ್ನು ಆದಷ್ಟು ಬೇಗನೆ ಬಹಿರಂಗಪಡಿಸಬೇಕು’ ಎಂದೂ ಪೀಠವು ಸೂಚಿಸಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯ ಮಾಡಿಲ್ಲ. ಆದರೆ, ಅರ್ಹ ವ್ಯಕ್ತಿಗಳಲ್ಲಿ ಶೇ 100ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುವಂತಾಗಬೇಕು ಎಂದಷ್ಟೇ ತಾನು ಹೇಳಿದ್ದಾಗಿ ಕೇಂದ್ರ ಸರ್ಕಾರವು ಕೋರ್ಟ್‌ಗೆ ಹೇಳಿತ್ತು.

ಲಸಿಕೆ ತಯಾರಿಕಾ ಕಂಪನಿಗಳಾದ ಭಾರತ್‌ ಬಯೊಟೆಕ್‌ ಲಿ. ಮತ್ತು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ, ಅರ್ಜಿಯನ್ನು ವಿರೋಧಿಸಿದ್ದವು. ಇದು ಸಾರ್ವಜನಿಕ ಹಿತಾಸಕ್ತಿಯ ರೂಪದಲ್ಲಿರುವ ವೈಯಕ್ತಿಕ ಉದ್ದೇಶದ ಅರ್ಜಿ. ಜಾಗತಿಕ ಮಟ್ಟದಲ್ಲಿ ಹಿಂದೆಂದೂ ಕಂಡಿರದ ರೀತಿಯ ಸಾಂಕ್ರಾಮಿಕದ ಸಂದರ್ಭದಲ್ಲಿ, ಈ ಅರ್ಜಿಯು ಜನರಲ್ಲಿ ಲಸಿಕೆ ಹಿಂಜರಿಕೆ ಮತ್ತು ಸಾರ್ವಜನಿಕ ಉನ್ಮಾದ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಈ ಕಂಪನಿಗಳು ವಾದಿಸಿದವು.

‘ಪ್ರತಿಕೂಲ ಪರಿಣಾಮ ನಗಣ್ಯ’

ಜನರಿಗೆ ಕೋವಿಡ್‌ ಲಸಿಕೆಯ 180 ಕೋಟಿ ಡೋಸ್‌ಗಳನ್ನು ಮಾರ್ಚ್‌ 13ರವರೆಗೆ ಹಾಕಲಾಗಿದೆ. 77,314 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಹಾಕಲಾದ ಲಸಿಕೆಯ ಒಟ್ಟು ಡೋಸ್‌ಗಳಿಗೆ ಹೋಲಿಸಿದರೆ ಇದು ಶೇ 0.004ರಷ್ಟು ಮಾತ್ರ. ಹಾಗೆಯೇ 15–18 ವರ್ಷದ ಒಳಗಿನವರಿಗೆ 8.91 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. 1,739 ನಗಣ್ಯ, 81 ಗಂಭೀರ ಮತ್ತು ಆರು ಅತಿ ಗಂಭೀರ ಪ್ರತಿಕೂಲ ಪರಿಣಾಮಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ.

ಕೋವಿಡ್‌ ಲಸಿಕೆಗೆ ಸಂಬಂಧಿಸಿದ ದಾಖಲೆಗಳು, ಲಸಿಕೆಯಲ್ಲಿ ಏನೇನಿವೆ ಎಂಬ ಎಲ್ಲ ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯ ಇವೆ ಎಂದೂ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.