ADVERTISEMENT

ಆನ್‌ಲೈನ್ ಮೂಲಕ ಸಿಎ ಪರೀಕ್ಷೆ ಅಸಾಧ್ಯ: ಸುಪ್ರೀಂಗೆ ಮಾಹಿತಿ ನೀಡಿದ ಐಸಿಎಐ

ಪಿಟಿಐ
Published 4 ನವೆಂಬರ್ 2020, 10:10 IST
Last Updated 4 ನವೆಂಬರ್ 2020, 10:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮುಂಬರುವ ಸಿಎ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗದು ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಕೋವಿಡ್‌ 19ರ ಪರಿಸ್ಥಿತಿಯಿಂದಾಗಿ ಆನ್‌ಲೈನ್‌ ಮೂಲಕ ಪರೀಕ್ಷೆಗಳನ್ನು ನಡೆಸುವಂತೆ ಕೆಲ ಅಭ್ಯರ್ಥಿಗಳು ಕೋರಿದ್ದರು.

ಈ ಕುರಿತು ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವ ಐಸಿಎಐ, ‘ಪರೀಕ್ಷೆಯು ಪರೀಕ್ಷಾರ್ಥಿಗಳ ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಿದೆ. ಮೂರು ಗಂಟೆಗಳ ಪರೀಕ್ಷೆಯ ಸ್ವರೂಪವೂ ಭಿನ್ನವಾಗಿದೆ. ಇಲ್ಲಿ ವಿಶ್ಲೇಷಣಾತ್ಮಕವಾಗಿ ಉತ್ತರಿಸಬೇಕಿದ್ದು, ಆಯ್ಕೆ ಸ್ವರೂಪದಲ್ಲಿ ಟಿಕ್ ಮಾಡಿ ಉತ್ತರಿಸುವಂತಹದ್ದಲ್ಲ’ ಎಂದು ತಿಳಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್, ದಿನೇಶ್ ಮಹೇಶ್ವರಿ, ಸಂಜೀವ್‌ ಖನ್ನಾ ಅವರಿದ್ದ ಪೀಠವು ಇದೇ ಸಂದರ್ಭದಲ್ಲಿ ಐಸಿಎಐಗೆ, ಕೋವಿಡ್‌ –19ನಿಂದ ಮೂಡಿರುವ ಪರಿಸ್ಥಿತಿಯಿದಾಗಿ ವಿದ್ಯಾರ್ಥಿಗಳ ಹಿತರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ಕುರಿತಂತೆ ತನ್ನ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಬೇಕು ಎಂದು ನಿರ್ದೇಶಿಸಿತು.

ಲೆಕ್ಕಪರಿಶೋಧಕರ ಪರೀಕ್ಷೆಯು ನಿಗದಿಯಂತೆ ನವೆಂಬರ್ 21ರಿಂದ ಡಿಸೆಂಬರ್ 14ರವರೆಗೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.