ADVERTISEMENT

2–3 ವಾರಗಳಿಗೆ ಬೇಕಾಗುವಷ್ಟು ಆಮ್ಲಜನಕ ಸಂಗ್ರಹವಿರಬೇಕು: ಎನ್‌ಟಿಎಫ್‌ ಶಿಫಾರಸು

ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹದ ಮಾದರಿ ಅಳವಡಿಸಿಕೊಳ್ಳಲು ಸಲಹೆ

ಪಿಟಿಐ
Published 25 ಜೂನ್ 2021, 9:59 IST
Last Updated 25 ಜೂನ್ 2021, 9:59 IST
ಗ್ಯಾಸ್ ಟ್ಯಾಂಕರ್‌– ಸಾಂದರ್ಭಿಕ ಚಿತ್ರ
ಗ್ಯಾಸ್ ಟ್ಯಾಂಕರ್‌– ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಕ್ಕೆ ಮಾಡಿರುವ ವ್ಯವಸ್ಥೆಯ ಮಾದರಿಯಲ್ಲಿಯೇ ಎರಡರಿಂದ ಮೂರು ವಾರಗಳ ಬಳಕೆಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್‌) ಶಿಫಾರಸು ಮಾಡಿದೆ.

ಕೋವಿಡ್‌–19ರಿಂದ ಜನರ ಜೀವಗಳನ್ನು ಉಳಿಸುವ ಉದ್ದೇಶದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಮ್ಲಜನಕ ಹಂಚುವ ವಿಧಾನವನ್ನು ರೂಪಿಸಲು ಸುಪ್ರೀಂ ಕೋರ್ಟ್‌ ವೈದ್ಯಕೀಯ ಕ್ಷೇತ್ರದ ತಜ್ಞರುಗಳನ್ನು ಒಳಗೊಂಡ ಎನ್‌ಟಿಎಫ್‌ ಅನ್ನು ಮೇ 6ರಂದು ರಚಿಸಿತ್ತು.

ಎಲ್ಲಾ ಆಸ್ಪತ್ರೆಗಳೂ ತುರ್ತು ಪರಿಸ್ಥಿತಿಗಳಿಗೆ ಪೂರಕವಾಗಿ ‘ಬಫರ್ ಸಾಮರ್ಥ್ಯ’ವನ್ನು ಹೊಂದಿರಬೇಕು. ಅದರ ಜತೆಗೆ ಹಿರಿಯ ಸಿಬ್ಬಂದಿ ಒಳಗೊಂಡಂತೆ ಆಮ್ಲಜನಕ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಬೇಕು ಎಂದು12 ಸದಸ್ಯರ ಈ ಕಾರ್ಯಪಡೆ ಶಿಫಾರಸು ಮಾಡಿದೆ.

ADVERTISEMENT

ಪಿಡುಗಿನ ಸಮಯದಲ್ಲಿ ಈಗಿನ ಮತ್ತು ಯೋಜಿತ ಬೇಡಿಕೆಗಳ ಆಧಾರದ ಮೇಲೆ ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಪೂರೈಸಬೇಕು. ಅದರ ಜತೆಗೆ ರಾಜ್ಯಗಳು ತಮ್ಮ ಅಗತ್ಯತೆ ಅನುಸಾರ ಶೇ 20ರಷ್ಟು ಬಫರ್ ಸಾಮರ್ಥ್ಯವನ್ನು ಹೊಂದಬೇಕು. ಅದಕ್ಕೆ ಪೂರಕವಾಗಿ ಹಾಗೂ ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಅನುಗುಣವಾಗಿ ಆಮ್ಲಜನಕ ಪೂರೈಕೆಯಾಗಬೇಕು ಎಂದು ಎನ್‌ಟಿಎಫ್‌ ಸಲಹೆ ನೀಡಿದೆ.

ಮುಂದಿನ ಸಾಂಕ್ರಾಮಿಕದ ಅಲೆಯನ್ನು ಎದುರಿಸಲು ಎಲ್‌ಎಂಒ ಉತ್ತಪಾದನೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಇದಕ್ಕಾಗಿ ಕೈಗಾರಿಕೆಗಳಲ್ಲಿ ಶೇಕಡಾ 5 ರಿಂದ 8ರಷ್ಟು ಎಲ್‌ಎಂಒ ಉತ್ಪಾದನೆಯನ್ನು ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ. ಸಂಬಂಧಿತ ಕೈಗಾರಿಕೆಗಳಿಗೆ ಸರ್ಕಾರ ಅಗತ್ಯ ಬೆಂಬಲ ಮತ್ತು ಸಬ್ಸಿಡಿ ನೀಡಬೇಕು ಎಂದು ಸಮಿತಿ ಸೂಚಿಸಿದೆ.

ತುರ್ತು ಸಂದರ್ಭವನ್ನು ಎದುರಿಸಲು ಕೈಗಾರಿಕಾ ಆಮ್ಲಜನಕ ಉತ್ಪಾದನಾ ಘಟಕಗಳ ಸಮೀಪದಲ್ಲಿಯೇ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರಗಳು ಮುಂದಾಗಬೇಕು ಎಂದು ಅದು ಸಲಹೆ ನೀಡಿದೆ.

ಸಿಲಿಂಡರ್‌ಗಳತ್ತಲೂ ಗಮನ ಹರಿಸಬೇಕಿದೆ ಎಂದಿರುವ ಸಮಿತಿಯು, ಪಾನೀಯ ಕೈಗಾರಿಕೆಗಳಿಂದ ಬರುವ ಸಿಒ2 ಸಿಲಿಂಡರ್‌ಗಳನ್ನೂ ಆಮ್ಲಜನಕ ಸಿಲಿಂಡರ್‌ಗಳಾಗಿ ಪರಿವರ್ತಿಸಬಹುದು ಎಂದು ಹೇಳಿದೆ.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 163 ಪುಟಗಳ ವರದಿಯಲ್ಲಿ ಎನ್‌ಟಿಎಫ್‌, ಆಸ್ಪತ್ರೆ ಮತ್ತು ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸೂಚಿಸಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಇರುವವರಿಗೆ ಮಾತ್ರ ಆಮ್ಲಜನಕ ಪೂರೈಸಬೇಕು. ಅಲ್ಲದೆ ರೋಗಿಗಳಿಗೆ ‘ಪ್ರೋನ್‌ ವಿಧಾನ’ದ ಕುರಿತೂ ಅರಿವು ಮೂಡಿಸಬೇಕು ಎಂದು ಹೇಳಿದೆ.

ರಾಜ್ಯ ಮಟ್ಟದಲ್ಲಿ ಆಮ್ಲಜನಕದ ಅಗತ್ಯತೆಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಾಮಾನ್ಯ ಸಮಯದಲ್ಲಿ ವಿಶೇಷ ವ್ಯವಸ್ಥೆಗಳ ಅಗತ್ಯವಿಲ್ಲ. ಆದರೆ, ತುರ್ತು ಪರಿಸ್ಥಿತಿಯಲ್ಲಿ 10-12 ಪ್ರಾದೇಶಿಕ ಉತ್ಪಾದನಾ ತಾಣಗಳೊಂದಿಗೆ ಆಮ್ಲಜನಕ ಗ್ರಿಡ್‌ ನಿರ್ವಹಣೆಯ ಅನುಷ್ಠಾನದ ಅಗತ್ಯವಿದೆ ಎಂದು ಸಮಿತಿ ಪ್ರತಿಪಾದಿಸಿದೆ.

ರಾಜ್ಯಗಳಲ್ಲಿ ಇರುವ ಆಮ್ಲಜನಕ ಉತ್ಪಾದನಾ ಪ್ರದೇಶ ಮತ್ತು ಸಂಗ್ರಹ ಘಟಕಗಳ ನಡುವೆ ಹೆಚ್ಚಿನ ಅಂತರ ಇರಬಾರದು. 24 ಗಂಟೆಗಳೊಳಗೆ ಉತ್ಪಾದನಾ ಘಟಕದಿಂದ ಸಂಗ್ರಹ ಘಟಕಕ್ಕ ಹೋಗುವ ವ್ಯವಸ್ಥೆ ಇರಬೇಕು ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.