ADVERTISEMENT

ನನ್ನ ವಿಳಾಸವನ್ನು ಬಹಿರಂಗ ಪಡಿಸಬೇಡಿ: ಮಾಧ್ಯಮಗಳಿಗೆ ನೂಪುರ್‌ ಶರ್ಮಾ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2022, 14:06 IST
Last Updated 5 ಜೂನ್ 2022, 14:06 IST
ನೂಪುರ್‌ ಶರ್ಮಾ (ಟ್ವೀಟರ್‌ ಚಿತ್ರ)
ನೂಪುರ್‌ ಶರ್ಮಾ (ಟ್ವೀಟರ್‌ ಚಿತ್ರ)   

ಬೆಂಗಳೂರು: ಪ್ರವಾದಿ ಮಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರು ತಮ್ಮ ವಿಳಾಸವನ್ನು ಬಹಿರಂಗ ಪಡಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಕುಟುಂಬದ ಭದ್ರತೆಗೆ ಬೆದರಿಕೆ ಇರುವುದಾಗಿ ನೂಪುರ್‌ ಶರ್ಮಾ ಟ್ವೀಟ್‌ ಮಾಡಿದ್ದಾರೆ.

'ನನ್ನ ವಿಳಾಸವನ್ನು ಎಲ್ಲಿಯೂ ಪ್ರಸಾರ ಮಾಡದಂತೆ ಎಲ್ಲಾ ಮಾಧ್ಯಮಗಳಿಗೆ ಮತ್ತು ಪ್ರತಿಯೊಬ್ಬರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಭದ್ರತೆಗೆ ಬೆದರಿಕೆಯಿದೆ' ಎಂದು ಟ್ವೀಟ್‌ನಲ್ಲಿ ನೂಪುರ್‌ ಮನವಿ ಮಾಡಿದ್ದಾರೆ.

ADVERTISEMENT

ಬೆನ್ನಲ್ಲೇ ಮತ್ತೊಂದು ಟ್ವೀಟ್‌ ಮಾಡಿರುವ ನೂಪುರ್‌ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಎಂದಿಗೂ ಯಾವುದೇ ಧರ್ಮದವರ ಭಾವನೆಗಳಿಗೆ ನೋವು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

'ಹಲವು ದಿನಗಳ ಹಿಂದೆ ಟಿವಿ ಸಂವಾದವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ಶಿವನ ಬಗ್ಗೆ ನಿರಂತರವಾಗಿ ಅವಮಾನ ಮತ್ತು ಅಗೌರವ ತೋರಲಾಗಿತ್ತು. ಅದು ಶಿವಲಿಂಗವಲ್ಲ, ನೀರಿನ ಕಾರಂಜಿ ಎಂದು ಅಣಕಿಸಲಾಯಿತು. ದೆಹಲಿಯ ರಸ್ತೆ ಬದಿಯ ಕಂಬಗಳಿಗೆ ಶಿವಲಿಂಗವನ್ನು ಹೋಲಿಸಿ ಅವಮಾನಿಸಲಾಯಿತು' ಎಂದು ನೂಪುರ್‌ ಶರ್ಮಾ ಟಿವಿ ಸಂವಾದದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ನಮ್ಮ ಮಹಾದೇವನ ಬಗ್ಗೆ ನಿರಂತರವಾಗಿ ಅವಮಾನಿಸುವುದನ್ನು ಮತ್ತು ಅಗೌರವಿಸುವುದನ್ನು ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ ಏನನ್ನೋ ಹೇಳಿದೆ. ನನ್ನ ಮಾತುಗಳು ಯಾರಿಗಾದರೂ ಮುಜುಗರವನ್ನುಂಟು ಮಾಡಿದಲ್ಲಿ ಅಥವಾ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಲ್ಲಿ, ನಾನು ಬೇಷರತ್ತಾಗಿ ನನ್ನ ಹೇಳಿಕೆಯನ್ನು ವಾಪಸ್‌ ತೆಗೆದುಕೊಳ್ಳುತ್ತಿದ್ದೇನೆ. ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ' ಎಂದು ನೂಪುರ್‌ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.