ಬಾಲೇಶ್ವರ (ಒಡಿಶಾ): ನೆರೆಯ ಜಾರ್ಖಂಡ್‌ನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಸುವರ್ಣರೇಖಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ಒಡಿಶಾದ ಬಾಲೇಶ್ವರ ಜಿಲ್ಲೆಯ ಹಳ್ಳಿಗಳಿಗೆ ನೀರು ನುಗ್ಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೋಗ್ರೈ, ಬಲಿಯಾಪಾಲ್, ಬಸ್ತಾ ಮತ್ತು ಜಲೇಶ್ವರ ಅಧಿಸೂಚಿತ ಪ್ರದೇಶ ಮಂಡಳಿಯ (ಎನ್‌ಎಸಿ) ಮೂರು ಬ್ಲಾಕ್‌ಗಳಲ್ಲಿರುವ 17 ಗ್ರಾಮ ಪಂಚಾಯತ್ ಪ್ರದೇಶಗಳು ಹಠಾತ್ ಪ್ರವಾಹಕ್ಕೆ ಒಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.
ತಗ್ಗು ಪ್ರದೇಶ ಹಾಗೂ ಪ್ರವಾಹ ಭೀತಿ ಎದುರಿಸುತ್ತಿರುವ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ. ಪರಿಸ್ಥಿತಿ ತೀರಾ ಹದಗೆಟ್ಟರೆ ಹತ್ತಿರದ ಆಶ್ರಯ ಶಿಬಿರಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯವಿದ್ದರೆ ಜನರನ್ನು ಸ್ಥಳಾಂತರಿಸಲು ಸಿದ್ಧರಾಗಿರುವಂತೆ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (ಬಿಡಿಒಗಳು) ಮತ್ತು ತಹಶೀಲ್ದಾರ್‌ಗೆ ಬಾಲೇಶ್ವರ ಜಿಲ್ಲಾಧಿಕಾರಿ ಸೂರ್ಯವಂಶಿ ಮಯೂರ್ ವಿಕಾಸ್ ಅವರು ಸೂಚನೆ ನೀಡಿದ್ದಾರೆ. ಅಲ್ಲದೇ ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಲು ಮುಖ್ಯ ಜಿಲ್ಲಾ ವೈದ್ಯಾಧಿಕಾರಿಗೆ (ಸಿಡಿಎಂಒ) ನಿರ್ದೇಶನ ನೀಡಿದ್ದಾರೆ.
ಜಾರ್ಖಂಡ್‌ನ ಚಾಂಡಿಲ್ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆ ಮಾಡಿದ ಕಾರಣ ಬಾಲೇಶ್ವರ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.