ADVERTISEMENT

ವಿದ್ಯಾರ್ಥಿನಿ ಸಾವು ಪ್ರಕರಣ | ಒಡಿಶಾದಲ್ಲಿ ಬಂದ್: ಜನಜೀವನ ಅಸ್ತವ್ಯಸ್ತ

ನ್ಯಾಯಾಂಗ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 15:11 IST
Last Updated 17 ಜುಲೈ 2025, 15:11 IST
ಭುವನೇಶ್ವರದಲ್ಲಿ ಗುರುವಾರ ಬಂದ್ ಪರಿಣಾಮ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಭುವನೇಶ್ವರದಲ್ಲಿ ಗುರುವಾರ ಬಂದ್ ಪರಿಣಾಮ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.   

ಭುವನೇಶ್ವರ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಆರೋ‍ಪಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಒಡಿಶಾದಲ್ಲಿ ಕಾಂಗ್ರೆಸ್ ಮತ್ತು ಇತರ ಏಳು ವಿರೋಧ ಪಕ್ಷಗಳು ಗುರುವಾರ ಕರೆ ನೀಡಿದ್ದ ರಾಜ್ಯ ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿತು. 

ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಆರ್‌ಜೆಡಿ, ಎಸ್‌ಪಿ, ಸಿಪಿಎಂಎಲ್, ಫಾರ್ವರ್ಡ್ ಬ್ಲಾಕ್, ಎನ್‌ಸಿಪಿ ಸೇರಿ ಏಳು ಪಕ್ಷಗಳು ಬಂದ್‌ಗೆ ಕರೆ ನೀಡಿದ್ದವು.

ಬಾಲಸೋರ್‌ ಕಾಲೇಜಿನ ಉಪನ್ಯಾಸಕರಿಂದಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದ ವಿದ್ಯಾರ್ಥಿನಿ, ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ನ್ಯಾಯ ಸಿಕ್ಕಿಲ್ಲ ಎಂದು ಬೆಂಕಿಹಚ್ಚಿಕೊಂಡು ಸಾವಿಗೀಡಾಗಿದ್ದಳು.

ADVERTISEMENT

ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆಯಲಾಗಿತ್ತು. ಇದರಿಂದ ಸಾರ್ವಜನಿಕ ಸಾರಿಗೆ ಬಸ್‌ ಸೇರಿದಂತೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ರೈಲ್ವೆ ಹಳಿಗಳ ಮೇಲೆ ಕುಳಿತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಹುತೇಕ ಸ್ಥಳಗಳಲ್ಲಿ ಮಧ್ಯಾಹ್ನದವರೆಗೆ ರೈಲು ಸಂಚಾರ ವ್ಯತ್ಯಯವಾಗಿತ್ತು ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ತಿಳಿಸಿದರು. 

ಭುವನೇಶ್ವರ, ಕಟಕ್ ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ರಸ್ತೆಗಳು ಬಿಕೋ ಎನ್ನುವ ಸ್ಥಿತಿ ಇತ್ತು. ಬಸ್ ಹಾಗೂ ರೈಲು ಪ್ರಯಾಣಿಕರು ಪರದಾಡಬೇಕಾಯಿತು.

ಬಂದ್‌ಗೆ ಒಡಿಶಾ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟಗಾರರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿತ್ತು. ಹೀಗಾಗಿ, ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಲಾಗಿತ್ತು.

ಮಾರುಕಟ್ಟೆಗಳು, ಶಾಲೆ–ಕಾಲೇಜುಗಳು, ಅಂಗಡಿಗಳು ಸಂಜೆವರೆಗೂ ಮುಚ್ಚಿದ್ದವು. ಆಂಬ್ಯುಲೆನ್ಸ್‌, ಆಸ್ಪತ್ರೆ, ಹಾಲು ಸೇರಿ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಆಗಲಿಲ್ಲ. ಗಣಿ ಕಂಪನಿಗಳ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಇತರೆ ದೊಡ್ಡ ಕಂಪನಿಗಳು, ಪರದಿಪ್‌ ಬಂದರಿನಲ್ಲಿ ಚಟುವಟಿಕೆ ಎಂದಿನಂತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದರು.

ಒಡಿಶಾ ಕಾಂಗ್ರೆಸ್‌ ಉಸ್ತುವಾರಿ ಅಜಯ್‌ಕುಮಾರ್ ಲಲ್ಲು, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಂಬಾ ಭುವನೇಶ್ವರದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದರು.

ಬಾಲಸೋರ್‌ನಲ್ಲಿ ರೈಲ್ವೆ ಹಳಿಯ ಮೇಲೆ ನಿಂತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಇದು ಆತ್ಮಹತ್ಯೆಯಲ್ಲ. ವ್ಯವಸ್ಥಿತವಾದ ಕೊಲೆ. ಮುಖ್ಯಮಂತ್ರಿ ಮಾಝಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರೆಯಲಿದೆ.
– ಅಜಯ್‌ ಕುಮಾರ್ ಲಲ್ಲು ಕಾಂಗ್ರೆಸ್ ಉಸ್ತುವಾರಿ
ಪರಿಪರಿಯಾಗಿ ಬೇಡಿಕೊಂಡರೂ ಈ ಸರ್ಕಾರ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಿಲ್ಲ. ಆಕೆಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು.
ಸುರೇಶ್‌ ಪಾಣಿಗ್ರಹಿ ಸಿಪಿಎಂ ರಾಜ್ಯ ಕಾರ್ಯದರ್ಶಿ
ಒಡಿಶಾದಲ್ಲಿ ಪ್ರತಿ ದಿನ 15 ಮಹಿಳೆಯರು ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ.
– ರಾಮಚಂದ್ರ ಕದಮ್ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.