ADVERTISEMENT

ಒಡಿಶಾ: ಮುಷ್ಕರ ಕೈಬಿಡುವಂತೆ ಅಧಿಕಾರಿಗಳಿಗೆ ಸಿ.ಎಂ ಮಾಝಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:59 IST
Last Updated 2 ಜುಲೈ 2025, 15:59 IST
-
-   

ಭುವನೇಶ್ವರ(ಪಿಟಿಐ): ಭುವನೇಶ್ವರ ನಗರಪಾಲಿಕೆ (ಬಿಎಂಸಿ) ಹೆಚ್ಚುವರಿ ಆಯುಕ್ತ ರತ್ನಾಕರ ಸಾಹೂ ಅವರ ಮೇಲಿನ ಹಲ್ಲೆ ಖಂಡಿಸಿ ನಡೆಸುತ್ತಿರುವ ಮುಷ್ಕರವನ್ನು ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಮರಳಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಒಡಿಶಾ ಸರ್ಕಾರ ಬುಧವಾರ ಮನವಿ ಮಾಡಿದೆ.

ಈ ನಡುವೆ, ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳ ಗುಂಪೊಂದು ಬಿಎಂಸಿ ಹೆಚ್ಚುವರಿ ಆಯುಕ್ತ ರತ್ನಾಕರ ಸಾಹೂ ಅವರನ್ನು ಕಚೇರಿಯಿಂದ ಮಂಗಳವಾರ ಹೊರಗೆ ಎಳೆದುಕೊಂಡು ಬಂದು, ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಖಂಡಿಸಿ ಒಡಿಶಾ ಆಡಳಿತ ಸೇವೆ(ಒಎಎಸ್‌) ಹಾಗೂ ಒಡಿಶಾ ಕಂದಾಯ ಸೇವೆ (ಒಆರ್‌ಎಸ್‌) ಅಧಿಕಾರಿಗಳು ಬುಧವಾರದಿಂದ ‘ಕೆಲಸ ಸ್ಥಗಿತ’ ಮುಷ್ಕರ ಆರಂಭಿಸಿದ್ದಾರೆ.

ADVERTISEMENT

ಇನ್ನೊಂದೆಡೆ, ಅಧಿಕಾರಿಗಳು ಆರಂಭಿಸಿರುವ ‘ಕೆಲಸ ಸ್ಥಗಿತ’ ಮುಷ್ಕರದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟು ನಿವಾರಿಸುವ ಸಂಬಂಧ ಮುಖ್ಯಮಂತ್ರಿ ಮೋಹನ್ ಮಾಝಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಕೂಡ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಸುರೇಶ್‌ ಪೂಜಾರಿ,‘ಅಧಿಕಾರಿ ಮೇಲಿನ ಹಲ್ಲೆ ಘಟನೆ ಎಲ್ಲರಿಗೂ ಆಘಾತ ತಂದಿದೆ. ಇಂತಹ ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ. ಘಟನೆಗೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.