ADVERTISEMENT

ಸಚಿವನ ಹತ್ಯೆಗೈದ ಎಎಸ್ಐ ಮಾನಸಿಕ ಅಸ್ವಸ್ಥನೆಂದು ಸಾಬೀತಿಗೆ ಯತ್ನ: ಮಾಜಿ ಡಿಐಜಿ

ಪಿಟಿಐ
Published 24 ಫೆಬ್ರುವರಿ 2023, 18:14 IST
Last Updated 24 ಫೆಬ್ರುವರಿ 2023, 18:14 IST
ಮೃತಪಟ್ಟ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್
ಮೃತಪಟ್ಟ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್   

ಭುವನೇಶ್ವರ: ‘ಒಡಿಶಾ ಸರ್ಕಾರದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್‌ರನ್ನು ಗುಂಡಿಕ್ಕಿ ಹತ್ಯೆಗೈದು ಸದ್ಯ ಅಮಾನತಿನಲ್ಲಿರುವ ಪೊಲೀಸ್ ಅಧಿಕಾರಿ ಗೋಪಾಲ್ ದಾಸ್ ಅವರನ್ನು ಮಾನಸಿಕ ಅಸ್ವಸ್ಥ ಎಂದು ಸಾಬೀತು ಮಾಡಿ ಶಿಕ್ಷೆಯಿಂದ ಪಾರುಗಾಣಿಸಲು ಯತ್ನ ನಡೆಯುತ್ತಿದೆ’ ಎಂದು ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಮಿಶ್ರಾ ಆರೋ‍ಪಿಸಿದರು.

ರಾಜ್ಯ ಪೊಲೀಸ್ ಇಲಾಖೆಯ ಮಾಜಿ ನಿರ್ದೇಶಕರಾದ ಪ್ರಕಾಶ್ ಮಿಶ್ರಾ ಅವರು ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದರು. ಜನವರಿ 29ರಂದು ಬ್ರಜರಾಜ್‌ನಗರದಲ್ಲಿ ಗುಂಡೇಟಿನ ಬಳಿಕ ಆರೋಗ್ಯ ಸಚಿವರು ಹತರಾಗಿದ್ದಾರೆ ಎಂಬ ಸುದ್ದಿಯ ಅಧಿಕೃತ ಘೋಷಣೆ ಅವಧಿಯನ್ನೂ ಮಿಶ್ರಾ ಪ್ರಶ್ನಿಸಿದ್ದಾರೆ.

’ಅಪರಾಧ ತನಿಖಾ ದಳದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಆರೋಪಿ ಗೋಪಾಲ್‌ ದಾಸ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸಾಬೀತು ಮಾಡಲು ಪ್ರಯತ್ನಗಳಾಗಿದೆ. ಈ ಮೂಲಕ ಶಿಕ್ಷೆಯಿಂದ ಅವರನ್ನು ಪಾರು ಮಾಡುವ ಸಂಚು ನಡೆದಿದೆ’ ಎಂದು ಹೇಳಿದರು.

ADVERTISEMENT

'ಮಾಧ್ಯಮಗಳಲ್ಲಿ ಪ್ರಕಟವಾದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗುಂಡೇಟು ಸಚಿವ ನಬಾ ದಾಸ್ ಅವರ ಎದೆಯ ಎಡ ಭಾಗಕ್ಕೆ ತಗುಲಿದೆ ಎಂದಿದೆ. ಇಂಥ ಸಂದರ್ಭ ವ್ಯಕ್ತಿ ಸಾಯಲು ಐದು ನಿಮಿಷ ಸಾಕು. ಆದರೆ ದಾಸ್ ಅವರನ್ನು ಏರ್‌ಲಿಫ್ಟ್ ಮೂಲಕ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ಕೊಡಿಸಲು ಹೇಗೆ ಸಮಯ ಒದಗಿತು’ ಎಂದು ಪ್ರಶ್ನಿಸಿದರು.

’ಸಚಿವರ ಹತ್ಯೆ ಸಂದರ್ಭ ಆರೋಪಿ ಗೋಪಾಲ್ ದಾಸ್, ತಾನು ರಿವಾಲ್ವಾರ್ ಲೋಡ್ ಮಾಡಿಲ್ಲ ಎಂಬ ಹೇಳಿಕೆ ನೀಡಿದ್ದು ಖಾಲಿ ರಿವಾಲ್ವಾರ್‌ನಿಂದ ಗುಂಡು ಹೊಡೆಯಲು ಸಾಧ್ಯವೇ’ ಎಂದು ತನಿಖೆಯ ವಿಶ್ವಾಸಾರ್ಹತೆಯನ್ನು ಮಿಶ್ರಾ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.