ADVERTISEMENT

ಒಡಿಶಾ ವಿದ್ಯಾರ್ಥಿನಿ ಆತ್ಮಹತ್ಯೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಸಿಎಂ ಮಾಝಿ

ಪಿಟಿಐ
Published 15 ಜುಲೈ 2025, 6:11 IST
Last Updated 15 ಜುಲೈ 2025, 6:11 IST
   

ಭುವನೇಶ್ವರ: ಪ್ರೊಫೆಸರ್ ಲೈಂಗಿಕ ಕಿರುಕುಳದಿಂದ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ.

ಪ್ರಕರಣದ ಪ್ರತಿಯೊಬ್ಬ ತಪ್ಪಿತಸ್ಥನನ್ನು ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಗುಡುಗಿದ್ದಾರೆ. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಶೇ 95ರಷ್ಟು ಸುಟ್ಟ ಗಾಯಗಳಿಂದ ಮೂರು ದಿನ ಜೀವನ್ಮರಣ ಹೋರಾಟ ನಡೆಸಿದ ವಿದ್ಯಾರ್ಥಿನಿ ಭುವನೇಶ್ವರದ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ ವಿರುದ್ಧ ಪ್ರಾಂಶುಪಾಲರು ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಶನಿವಾರ ಈ ನಿರ್ಧಾರ ಕೈಗೊಂಡಿದ್ದರು.

ADVERTISEMENT

ಮೊದಲಿಗೆ ಬಾಲೇಶ್ವರದ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಲಾಗಿತ್ತು. ಬಳಿಕ, ಉನ್ನತ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್‌ಗೆ ಕಳುಹಿಸಲಾಗಿತ್ತು.

‘ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳು ಮತ್ತು ತಜ್ಞ ವೈದ್ಯಕೀಯ ತಂಡದ ಅವಿಶ್ರಾಂತ ಪ್ರಯತ್ನಗಳ ಹೊರತಾಗಿಯೂ ಸಂತ್ರಸ್ತೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಬೇಕೆಂದು ಭಗವಾನ್ ಜಗನ್ನಾಥನನ್ನು ಬೇಡಿಕೊಳ್ಳುತ್ತೇನೆ’ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಮಾಝಿ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ತಪ್ಪಿತಸ್ಥರೆಲ್ಲರೂ ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ ಎಂದು ನಾನು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಭರವಸೆ ನೀಡುತ್ತೇನೆ. ಅಧಿಕಾರಿಗಳಿಗೆ ವೈಯಕ್ತಿಕವಾಗಿ ಸೂಚನೆಗಳನ್ನು ನೀಡಿದ್ದೇನೆ. ಸರ್ಕಾರವು ಕುಟುಂಬದ ಜೊತೆ ದೃಢವಾಗಿ ನಿಲ್ಲುತ್ತದೆ’ಎಂದು ಅವರು ಹೇಳಿದ್ದಾರೆ.

ಭುವನೇಶ್ವರದ ಏಮ್ಸ್‌ನ 5ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.