ADVERTISEMENT

ಒಡಿಶಾ: ಹಾಸ್ಟೆಲ್‌ ಶುಲ್ಕ ಪಾವತಿಸಲು ಕಾರ್ಮಿಕಳಾಗಿ ದುಡಿದ‌ ವಿದ್ಯಾರ್ಥಿನಿ

ಪಿಟಿಐ
Published 11 ಫೆಬ್ರುವರಿ 2021, 10:52 IST
Last Updated 11 ಫೆಬ್ರುವರಿ 2021, 10:52 IST
 ಪ್ರಾತಿನಿಧಿಕ ಚಿತ್ರ
 ಪ್ರಾತಿನಿಧಿಕ ಚಿತ್ರ   

ಭುವನೇಶ್ವರ: ಒಡಿಶಾದ ಡಿಪ್ಲೊಮಾದ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್‌ ಶುಲ್ಕಕ್ಕಾಗಿ ಹಣ ಸಂಗ್ರಹಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕಾರ್ಮಿಕಳಾಗಿ ಕೆಲಸ ಮಾಡಲು ತನ್ನ ಹೆಸರು ನೋಂದಾಯಿಸಿದ್ದಾರೆ.

22 ವರ್ಷದ ಲೊಝಿ ಬೆಹೆರಾ ಬಡ ದಲಿತ ಕುಟುಂಬಕ್ಕೆ ಸೇರಿದವಳು. ಹಾಸ್ಟೆಲ್‌‌ ಶುಲ್ಕ ಬಾಕಿ ಇರುವ ಕಾರಣ, ಆಕೆಯ ಡಿಪ್ಲೊಮಾದ ಪ್ರಮಾಣಪತ್ರವನ್ನು ಕಾಲೇಜು ತಡೆಹಿಡಿದಿತ್ತು.

ಈ ಹಿನ್ನೆಲೆಯಲ್ಲಿ ಶುಲ್ಕದ ಹಣ ಸಂಗ್ರಹಿಸಲು ಲೊಝಿ,20 ದಿನಗಳ ಕಾಲ ಪುರಿಯ ದೆಲಾಂಗ್‌ ಬ್ಲಾಕ್‌ನಲ್ಲಿ ಕೂಲಿ ಕಾರ್ಮಿಕಳಾಗಿ (ದಿನದ ಕೂಲಿ ₹207) ಕೆಲಸ ಮಾಡಿದ್ದಳು.

ADVERTISEMENT

ಭುವನೇಶ್ವರದ ಖಾಸಗಿ ಕಾಲೇಜಿನ ಈ ವಿದ್ಯಾರ್ಥಿನಿಯ ಬಗ್ಗೆ ಮೊದಲು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾ ಅಧಿಕಾರಿಗಳು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಅಲ್ಲದೆ ಕಾಲೇಜಿನ ಅಧಿಕಾರಿಗಳು ಕೂಡ ಆಕೆಯ ನಿವಾಸಕ್ಕೆ ಬಂದು, ಡಿಪ್ಲೊಮಾದ ಪ್ರಮಾಣಪತ್ರವನ್ನು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವರೊಂದಿಗೆ ಮಾತನಾಡಿದ ಲೊಝಿ ಬೆಹೆರಾ,‘ ನಾನು ಮಾಡುತ್ತಿದ್ದ ಕೆಲಸದ ಬಗ್ಗೆ ನನಗೆ ಎಂದೂ ನಾಚಿಗೆಯಾಗಿಲ್ಲ. ಕೆಲವರು ನನ್ನನ್ನು ಕೀಳಾಗಿ ನೋಡಿರಬಹುದು. ಆದರೆ ನಾನು ಮಾಡುವ ಕೆಲಸದ ಬಗ್ಗೆ ನಾಚಿಕೆಪಡಲು ಯಾವುದೇ ಕಾರಣವಿರಲಿಲ್ಲ. ಯಾವುದೇ ಕೆಲಸ ಸಣ್ಣದಲ್ಲ. ನಾನು ಸಮುದಾಯ ರಸ್ತೆ ಅಭಿವೃದ್ಧಿ ಯೋಜನೆಯಡಿ ದಿನಕ್ಕೆ ₹207 ಸಂಪಾದಿಸುತ್ತಿದ್ದೇನೆ’ ಎಂದರು.

ಬೆಹೆರಾಗೆ ಒಟ್ಟು ಐದು ಜನ ಸಹೋದರಿಯರು ಇದ್ದು, ಇದರಲ್ಲಿ ಇಬ್ಬರು ಬೆಹರಾ ಜತೆಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

‘ಲಾಕ್‌ಡೌನ್‌ ವೇಳೆಯಲ್ಲಿ ನಾವು ಮನೆಯಲ್ಲಿ ಸುಮ್ಮನೆ ಕುಳಿತಿದ್ದೆವು. ಆಗ ಸರಪಂಚ್ ಅವರು ಗ್ರಾಮಸ್ಥರಿಗೆ ರಸ್ತೆ ಅಭಿವೃದ್ಧಿ ಯೋಜನೆಯಡಿ ಕೆಲಸ ಮಾಡುವಂತೆ ಹೇಳಿದರು. ಇದು ನನಗೆ ಕಾಲೇಜು ಶುಲ್ಕವನ್ನು ಸಂಗ್ರಹಿಸಲು ಸಿಕ್ಕ ಅವಕಾಶ ಎಂದು ಭಾವಿಸಿ, ನಾನು ಕೆಲಸ ಆರಂಭಿಸಿದೆ’ ಎಂದು ಬೆಹೆರಾ ಹೇಳಿದರು.

‘ಹಾಸ್ಟೆಲ್‌ ಶುಲ್ಕ ₹44,500 ಬಾಕಿ ಉಳಿದಿತ್ತು. ಇದರಿಂದಾಗಿ ಕಾಲೇಜು, ನನ್ನ ಪ್ರಮಾಣಪತ್ರವನ್ನು ತಡೆಹಿಡಿದಿತ್ತು. ನನ್ನ ತಂದೆ ಒಬ್ಬ ಕಲ್ಲುಕುಟಿಗ, ನಾವು ಐದು ಮಂದಿ ಸಹೋದರಿಯರು ಇದ್ದೇವೆ. ಕೇವಲ ₹20,000 ಮಾತ್ರ ಕಟ್ಟಲು ಸಾಧ್ಯವಾಯಿತು’ ಎಂದು ಅವರು ತಿಳಿಸಿದರು.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಿಜೆಡಿ ಪಕ್ಷದ ಅಂಗವಾದ ‘ಒಡಿಶಾ ಮೊ ಪರಿವಾರ್’ ಸಂಘಟನೆಯು ಬೆಹೆರಾಗೆ ವಿದ್ಯಾಭ್ಯಾಸಕ್ಕೆಂದು ₹30,000 ಚೆಕ್‌ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ಆಕೆಗೆ ಸೂಕ್ತ ಉದ್ಯೋಗ ಒದಗಿಸಿ ಕೊಡುವುದಾಗಿ ಪುರಿಯ ಜಿಲ್ಲಾಧಿಕಾರಿ ಸಮರ್ಥ್‌ ವರ್ಮಾ ಅವರು ಭರವಸೆ ನೀಡಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.