ADVERTISEMENT

ನಾಗ್ಪುರ: ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ 23 ರೋಗಿಗಳ ಸಾವು

ಗಂಭೀರ ಸ್ಥಿತಿಯಲ್ಲಿರುವ, ಕೊನೆ ಗಳಿಗೆಯಲ್ಲಿ ರೋಗಿಗಳ ದಾಖಲು: ವೈದ್ಯರ ಹೇಳಿಕೆ

ಪಿಟಿಐ
Published 4 ಅಕ್ಟೋಬರ್ 2023, 12:37 IST
Last Updated 4 ಅಕ್ಟೋಬರ್ 2023, 12:37 IST
-
-   

ನಾಗ್ಪುರ: ನಗರದಲ್ಲಿರುವ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಒಟ್ಟು 23 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್‌) 14 ರೋಗಿಗಳು ಮೃತಪಟ್ಟಿದ್ದಾರೆ’ ಎಂದು ಸಂಸ್ಥೆಯ ಡೀನ್ ಡಾ.ರಾಜ್‌ ಗಜಭಿಯೆ ತಿಳಿಸಿದ್ದಾರೆ.

ಮತ್ತೊಂದು ಆರೋಗ್ಯಸಂಸ್ಥೆಯಾದ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಐಜಿಜಿಎಂಸಿಎಚ್‌) 9 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಜಿಎಂಸಿಎಚ್‌ 1,900 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ದಿನ‌ವೊಂದಕ್ಕೆ ಸರಾಸರಿ 10 ರಿಂದ 12 ರೋಗಿಗಳ ಸಾವುಗಳು ವರದಿಯಾಗುತ್ತವೆ. ಈ ಆಸ್ಪತ್ರೆಗೆ ಕೊನೆ ಗಳಿಗೆಯಲ್ಲಿ ರೋಗಿಗಳನ್ನು ಕರೆ ತರಲಾಗುತ್ತದೆ. ಅವರಲ್ಲಿ ಬಹುತೇಕ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. ಇಂತಹ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಡಾ.ರಾಜ್‌ ಗಜಭಿಯೆ ವಿವರಿಸಿದ್ದಾರೆ.

‘ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನೇ ಜಿಎಂಸಿಎಚ್‌ಗೆ ಕರೆತರಲಾಗುತ್ತದೆ’ ಎಂದೂ ಹೇಳಿದ್ದಾರೆ.

‘ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಅಗತ್ಯವಿರುವಂತಹ ರೋಗಿಗಳನ್ನು ಒಳಗೊಂಡಂತೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನೇ ಐಜಿಜಿಎಂಸಿಎಚ್‌ಗೆ ಕರೆತರಲಾಗುತ್ತದೆ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಜಿಜಿಎಂಸಿಎಚ್‌ 800 ‌ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ದಿನವೊಂದಕ್ಕೆ ಸರಾಸರಿ 6 ರೋಗಿಗಳು ಮರಣ ಹೊಂದುತ್ತಾರೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.