ADVERTISEMENT

ಸರ್ಕಾರ ಅಸ್ಥಿರ: ಬಂಗಾಳದಲ್ಲಿ ಹೆಚ್ಚಿದ ಪರ–ವಿರೋಧ ವಾಗ್ವಾದ

ಪಿಟಿಐ
Published 14 ನವೆಂಬರ್ 2022, 12:41 IST
Last Updated 14 ನವೆಂಬರ್ 2022, 12:41 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದ ಸ್ಥಿರತೆ ಕುರಿತು ವಾಗ್ವಾದದಲ್ಲಿ ತೊಡಗಿವೆ. ಇದರಿಂದಾಗಿ ಒಂದೆಡೇ ಚಳಿಯ ವಾತಾವರಣ ಆವರಿಸುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ಬಿಸಿ ಏರುತ್ತಿದೆ.

ಡಿಸೆಂಬರ್‌ ತಿಂಗಳಲ್ಲಿ ರಾಜಕೀಯ ಸ್ಥಿತ್ಯಂತರ ಆಗಬಹುದು ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ಮತ್ತು ಮುಖಂಡರಲ್ಲಿ ಹೆಚ್ಚಿನ ಕುತೂಹಲ ಕೆರಳಿಸಿದ್ದು, ಚರ್ಚೆಗೂ ಗ್ರಾಸವೊದಗಿಸಿದೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿಯ ಹಲವು ನಾಯಕರು, ‘ವರ್ಷಾಂತ್ಯದ ವೇಳೆಗೆ ಟಿಎಂಸಿ ನೇತೃತ್ವದ ಸರ್ಕಾರದ ಆಡಳಿತ ಅಂತ್ಯವಾಗಲಿದೆ‘ ಎಂದು ಪ್ರತಿಪಾದಿದ್ದರು. ಇದನ್ನು ಆಡಳಿತ ಪಕ್ಷದ ಹಲವರು ತಳ್ಳಿಹಾಕಿದ್ದಾರೆ.

ADVERTISEMENT

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಶಸ್ತ್ರಾಸ್ತ್ರಗಳ ಜಪ್ತಿ ಘಟನೆ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳವಳ ವ್ಯಕ್ತಪಡಿಸಿದ್ದು, ಬಂಗಾಳದ ಉತ್ತರ ಭಾಗದಲ್ಲಿ ಶಾಂತಿಭಂಗ ಯತ್ನಗಳು ನಡೆದಿವೆ ಎಂದಿದ್ದರು.

ಪ್ರತ್ಯೇಕವಾಗಿ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಬಂಗಾಳದ ಉತ್ತರ ಭಾಗದಲ್ಲಿ ಗಟ್ಟಿಯಾಗುತ್ತಿದೆ. ಬಿಜೆಪಿಯ ಮುಖಂಡರು, ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು, ಯಾವುದೇ ಸಂದರ್ಭದಲ್ಲಿ ಬದಲಾವಣೆ ಆಗಬಹುದು ಎಂದು ಆಗಾಗ್ಗೆ ಹೇಳುತ್ತಿದ್ದಾರೆ.

ಬಿಜೆಪಿ ನಾಯಕತ್ವವು ಈ ಮಧ್ಯೆ ತನ್ನದೇ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಸಂಚು ನಡೆಸಿದ್ದಾರೆ ಎಂಬುದು ಅವರ ಹೇಳಿಕೆಗಳಿಂದಲೇ ದೃಢವಾಗಲಿದೆ ಎಂದಿದ್ದಾರೆ.

ಈ ಮಾತಿಗೆ ದನಿಗೂಡಿಸಿರುವ ಟಿಎಂಸಿಯ ಹಿರಿಯ ನಾಯಕ ಸೌಗತ ರಾಯ್, ‘ಹೇಗಾದರೂ ಅಧಿಕಾರವನ್ನು ಕಬಳಿಸುವ ಯತ್ನದಲ್ಲಿ ಬಿಜೆಪಿ ಇದೆ. ಅಧಿಕಾರಕ್ಕಾಗಿ ಆ ಪಕ್ಷ ಯಾವುದೇ ಹಂತಕ್ಕೆ ಇಳಿಯಬಹುದು ಎಂಬುದನ್ನು ಮಹಾರಾಷ್ಟ್ರ, ಇತರೆ ರಾಜ್ಯಗಳಲ್ಲಿ ನೋಡಿದ್ದೇವೆ’ ಎಂದಿದ್ದಾರೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಟಿಎಂಸಿ ನೇತೃತ್ವದ ಸರ್ಕಾರ ಡಿಸೆಂಬರ್ ವೇಳೆಗೆ ನಿರ್ಗಮಿಸಲಿದೆ. 2024ರ ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯಲಿದೆ ಎಂದಿದ್ದಾರೆ. ರಾಜ್ಯದಲ್ಲಿ ಡಿಸೆಂಬರ್‌ ವೇಳೆಗೆ ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳು ಘಟಿಸಲಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರೂ ಹೇಳಿದ್ದರು.

‘ಬಿಜೆಪಿ ಬಿಂಬಿಸಿರುವುದಕ್ಕಿಂತಲೂ ರಾಜ್ಯದಲ್ಲಿ ಪರಿಸ್ಥಿತಿ ಉತ್ತಮವಾಗಿದೆ’ ಎಂದು ರಾಜಕೀಯ ವಿಶ್ಲೇಷಕರು ಮತ್ತು ಆರ್ಥಿಕ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.